ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ವಿದ್ಯುನ್ಮಾನ ಮತಯಂತ್ರ (ಇವಿಎಂ) ಗಳ ಸಮಗ್ರತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.
ಏಕೆಂದರೆ, ಸ್ವಘೋಷಿತ ಸೈಬರ್ ಎಕ್ಸ್‌ಪರ್ಟ್ ಓರ್ವ ಹಣ ಪಡೆದು ಇವಿಎಂ ಹ್ಯಾಕ್ ಮಾಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುವುದಾಗಿ ಇಂಡಿಯಾ ಟುಡೇ ರಹಸ್ಯ ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಸೈಯದ್ ಶುಜಾ ಎಂಬಾತ ತಾನು ಯುಎಸ್ ರಕ್ಷಣಾ ಇಲಾಖೆಯ ತಂತ್ರಜ್ಞಾನ ಬಳಸಿಕೊಂಡು ಇವಿಎಂ ಹ್ಯಾಕ್ ಮಾಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುತ್ತೇನೆ ಎಂದಿದ್ದಾನೆ. ಯುಎಸ್ ರಕ್ಷಣಾ ಇಲಾಖೆ ಜೊತೆ ತಾನು ಗುತ್ತಿಗೆ ಹೊಂದಿದ್ದೆ ಎಂದು ಹೇಳಿಕೊಂಡಿದ್ದಾನೆ.
ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಸೈಯದ್ ಶುಜಾ ಅನೇಕ ಚುನಾವಣೆಗಳ ಸಂದರ್ಭ ಆರೋಪಿಸಿದ್ದ. ವಿಶೇಷವಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ್ದ 2014ರ ಲೋಕಸಭೆ ಚುನಾವಣೆಯಲ್ಲಿ ಈ ಆರೋಪ ಮಾಡಿದ್ದ. ಈ ಬಾರಿ ಮಹಾರಾಷ್ಟ್ರದ ಪ್ರತಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ (ಎಂವಿಎ)ಯ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿದ್ದಾರೆ ಎಂದಿದ್ದಾನೆ.
ಇಂಡಿಯಾ ಟುಡೇ ವರದಿಗಾರರು ಮಹಾರಾಷ್ಟ್ರದ ಸಂಸದರೊಬ್ಬರ ಆಪ್ತ ಸಹಾಯಕನಂತೆ ಸೈಯದ್ ಶುಜಾನನ್ನು ಸಂಪರ್ಕಿಸಿದ್ದರು. ಈ ವೇಳೆ ಆತ, ತನ್ನ ಬಳಿ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 281 ಕ್ಷೇತ್ರಗಳ ಆಕ್ಸೆಸ್ (ಪ್ರವೇಶ) ಇದ್ದು, ವಿವಿಪ್ಯಾಟ್ ವಿವರಗಳನ್ನು ಒದಗಿಸಿದರೆ 63 ಕ್ಷೇತ್ರಗಳ ಇವಿಎಂಗಳನ್ನು ಟ್ಯಾಂಪರ್ ಮಾಡಿಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದಾಗಿ ಎಂದು ತಿಳಿದು ಬಂದಿದೆ.
ವಿವಿಪ್ಯಾಟ್ ವಿವರ ಬಳಸಿಕೊಂಡು ನೀವು ಹೇಗೆ ಇವಿಎಂ ಟ್ಯಾಂಪರ್ ಮಾಡುತ್ತೀರಿ? ಎಂದು ವರದಿಗಾರ ಕೇಳಿದ್ದಕ್ಕೆ “ನಾನು ಫೈಲ್ ಪ್ರಿ ಪ್ರೋಗ್ರಾಂ ಮಾಡಿ ಇಟ್ಟಿರುತ್ತೇನೆ. ಉದಾಹರಣೆಗೆ ಅದು ಬಿಜೆಪಿ ಪರ ಫೈಲ್ ಆಗಿದ್ದರೆ, ಚುನಾವಣೆಯ ದಿನದಂದು ಟ್ರಾನ್ಸ್‌ಮಿಷನ್ ಪ್ರಾರಂಭವಾಗುವಾಗ, ಅವರ ಫೈಲ್ ತಡೆದು, ನನ್ನ ಫೈಲ್ ಅನ್ನು ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇನೆ” ಎಂದು ಸೈಯದ್ ಶುಜಾ ಹೇಳಿಕೊಂಡಿರುವುದಾಗಿ ಇಂಡಿಯಾ ಟುಡೇ ವಿವರಿಸಿದೆ. ಇವಿಎಂಗಳು ಆನ್ ಇಲ್ಲದಿದ್ದರೂ ಟ್ರಾನ್ಸ್‌ಮಿಷನ್ ಮುಂದುವರಿಯುತ್ತದೆ ಎಂದು ಶುಜಾ ತಿಳಿಸಿದ್ದಾನೆ ಎಂದಿದೆ.
“ಇವಿಎಂ ತೆರೆದಾಗ, ಹೊಸ ಫೈಲ್ ಬರುತ್ತದೆ. ನಂತರ ಟ್ರಾನ್ಸ್‌ಮಿಷನ್ ಎಣಿಸಲಾಗುತ್ತದೆ. ಈ ಪ್ರಕ್ರಿಯೆ ಬಹಳ ಸುಲಭದ್ದಾಗಿದೆ. ಇವಿಎಂ ಟ್ಯಾಂಪರ್ ಮಾಡಿದ ಮುಂದಿನ ಮೂರು ದಿನಗಳವರೆಗೆ ನಾನು ಜಾಗರೂಕನಾಗಿರಬೇಕು. ಟ್ರಾನ್ಸ್‌ಮಿಷನ್ ಆಗುತ್ತಿದೆಯೋ ಇಲ್ಲವೋ ಎಂದು ಪ್ರತಿ ಗಂಟೆಗೆ ಸ್ಕ್ಯಾನ್ ಮಾಡಬೇಕು” ಎಂದು ಶುಜಾ ಹೇಳಿಕೊಂಡಿದ್ದಾನೆ.
ಗಣಿತಶಾಸ್ತ್ರದಲ್ಲಿ ಪಿಹೆಚ್‌ಡಿ ಮೈನರ್ ಆಗಿರುವ ಶುಜಾ ಇವಿಎಂ ಹ್ಯಾಕ್ ಮಾಡುವ ತನ್ನ ಕೆಲಸಕ್ಕಾಗಿ 6 ಮಿಲಿಯನ್ ಡಾಲರ್ (ಅಂದಾಜು ರೂ. 52-53 ಕೋಟಿ) ಬೇಡಿಕೆಯಿಟ್ಟಿದ್ದಾನೆ. ಇವಿಎಂ ಹ್ಯಾಕಿಂಗ್ ಕುರಿತು ಶುಜಾ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ, ಶುಜಾ ಇವಿಎಂಗಳನ್ನು ಹ್ಯಾಕ್ ಮತ್ತು ರಿಗ್ಗಿಂಗ್ ಮಾಡಿರುವುದಾಗಿ ಆರೋಪಿಸಿ ಚುನಾವಣಾ ಆಯೋಗ ದೆಹಲಿ ಪೊಲೀರಿಗೆ ದೂರು ನೀಡಿತ್ತು. ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸ್ಕೈಪ್ ಮೂಲಕ ಲಂಡನ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶುಜಾ, 2014 ರಲ್ಲಿ ತನ್ನ ತಂಡದ ಸದಸ್ಯರನ್ನು ಕೊಂದ ನಂತರ ದೇಶದಲ್ಲಿ ಬೆದರಿಕೆ ಇದೆ ಎಂದು ಭಾವಿಸಿದ್ದರಿಂದ ಭಾರತದಿಂದ ಪಲಾಯನ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಚುನಾವಣೆಯಲ್ಲಿ ಇವಿಎಂ ಹ್ಯಾಕಿಂಗ್ ಬಗ್ಗೆ ತಿಳಿದಿದ್ದರಿಂದ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರನ್ನು ‘ಕೊಲ್ಲಲಾಗಿದೆ’ ಎಂದು ಶುಜಾ ಆರೋಪಿಸಿದ್ದಾನೆ.
ಇವಿಎಂ ಟ್ಯಾಂಪರಿಂಗ್‌ನ ಆರೋಪಗಳು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಮಹಾರಾಷ್ಟ್ರದಲ್ಲಿ ಪ್ರತಿಧ್ವನಿಸಿತ್ತು. ಗೆದ್ದ ಶಿವಸೇನಾ ಸಂಸದ ರವೀಂದ್ರ ವೈಕರ್ ಅವರ ಸಂಬಂಧಿಯೋರ್ವ ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ಹ್ಯಾಕ್ ಮಾಡಲು ಮೊಬೈಲ್ ಮೂಲಕ ಒಟಿಪಿ ಕ್ರಿಯೇಟ್ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಚುನಾವಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಆಗಿದೆ ಎಂದು ಕಾಂಗ್ರೆಸ್ ಮಾಡಿದ್ದ ಆರೋಪವನ್ನು ಚುನಾವಣಾ ಆಯೋಗ ಅಲ್ಲಗಳೆದಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸಿದೆ. ಇದು ಒಂದು ರಾಷ್ಟ್ರೀಯ ಪಕ್ಷದ ಕೀಳು ನಡೆ ಎಂದು ಹೇಳಿಕೊಂಡಿತ್ತು.
ಹರಿಯಾಣದ ಸುಮಾರು 26 ಕ್ಷೇತ್ರಗಳಲ್ಲಿ ಇವಿಎಂ ಟ್ಯಾಂಪರಿಂಗ್ ಆದ ಕುರಿತು ಅನುಮಾನ ವ್ಯಕ್ತಪಡಿಸಿ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಇವಿಎಂಗಳ ಬ್ಯಾಟರಿಯ ಭಿನ್ನತೆಗಳ ಕುರಿತು ಗಮನ ಸೆಳೆದಿತ್ತು. ಆದರೆ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.