ನವದೆಹಲಿ | ಆರೋಪಿಗಳು ತಪ್ಪಿತಸ್ಥರೋ ಅಲ್ಲವೋ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯವೇ ಹೊರತು ಆಡಳಿತಗಾರರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರೋಪಗಳ ಆಧಾರದ ಮೇಲೆ ಒಬ್ಬರ ನಿವಾಸವನ್ನು ಹೇಗೆ ಒಡೆಯಬಹುದು? ಸರ್ಕಾರೀ ಆಡಳಿತಗಾರರು ಆರೋಪಿಗಳಿಗೆ ಶಿಕ್ಷೆ ವಿಧಿಸುವ ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಹೇಳಿದೆ. ಬುಲ್ಡೋಜರ್ ರಾಜ್ ವಿರುದ್ಧದ ಅರ್ಜಿಗಳಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಸರ್ಕಾರಿ ವ್ಯವಸ್ಥೆ ಹೇಗೆ ಹೇಳುತ್ತದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಆರೋಪಿಗಳ ಮನೆಗಳನ್ನು ನೆಲಸಮ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವ್ಯಕ್ತಿ ತಪ್ಪಿತಸ್ಥನೋ ಅಲ್ಲವೋ ಎಂದು ಸರ್ಕಾರ ಹೇಳಲು ಸಾಧ್ಯವಿಲ್ಲ. ಹಾಗೆ ಸೂಚಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದ ಕೆಲಸವನ್ನು ಸರಕಾರ ಕೈಗೆತ್ತಿಕೊಳ್ಳಬಾರದು.
ಕೇವಲ ಪ್ರಕರಣದಲ್ಲಿ ಆರೋಪಿಯಾದ ಮಾತ್ರಕ್ಕೆ ಒಬ್ಬ ಅಪರಾಧಿಯಾಗುವುದಿಲ್ಲ. ಅವನು ತಪ್ಪಿತಸ್ಥನೇ ಆದರೂ, ತನ್ನ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಆರೋಪಿ ಎಂಬ ಕಾರಣಕ್ಕೆ ಮನೆಯನ್ನು ಕೆಡವಿರುವುದು ಕಾನೂನು ಬಾಹಿರ. ವಸತಿ ಮೂಲಭೂತ ಹಕ್ಕಾಗಿದೆ.’ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರಕರಣಗಳಲ್ಲಿ ಭಾಗಿಯಾದವರ ಮನೆಗಳನ್ನು ಕೆಡವುವಂತಿಲ್ಲ. ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳನ್ನು ಬೀದಿಗೆ ಎಳೆಯುವಂತಿಲ್ಲ. ಅದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ.
ಅದೇ ಸಮಯದಲ್ಲಿ, ವ್ಯಕ್ತಿಗಳ ಅಕ್ರಮ ಕಟ್ಟಡಗಳನ್ನು ಕಾನೂನುಬದ್ಧವಾಗಿ ನೆಲಸಮಗೊಳಿಸುವ ಹಕ್ಕು ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ ಕೆಡವುವಾಗ ಕಾನೂನು ಕ್ರಮಗಳನ್ನು ಅನುಸರಿಸಬೇಕು. ಹಕ್ಕು ಉಲ್ಲಂಘನೆಯಾದಲ್ಲಿ ನಷ್ಟ ಪರಿಹಾರಕ್ಕೆ ಅರ್ಹವಾಗಿರುತ್ತದೆ.
ಮುಂಚಿತವಾಗಿ ಸೂಚನೆ ಇಲ್ಲದೆ ಮನೆಗಳನ್ನು ಕೆಡವಬೇಡಿ. ಕನಿಷ್ಠ 15 ದಿನಗಳ ಮುಂಚಿತವಾಗಿ ಸೂಚನೆ ನೀಡಬೇಕು. ಕೆಡವುವ ಪ್ರಕ್ರಿಯೆಯನ್ನು ಚಿತ್ರೀಕರಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.