ಮುಂಬೈ | ಪತ್ನಿಯನ್ನು ನಿಂದಿಸುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ತಡೆಯುವುದು ಮತ್ತು ಕಾರ್ಪೆಟ್ ಮೇಲೆ ಮಲಗಲು ಹೇಳುವ ಆರೋಪಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ‘ಕ್ರೌರ್ಯ’ ವೆಂದು ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2002ರಲ್ಲಿ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಪತಿಯನ್ನು ಖುಲಾಸೆಗೊಳಿಸಿ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಪತಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 498ಎ ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಶಿಕ್ಷೆಯ ವಿರುದ್ಧ ಆರೋಪಿಗಳು ಸಲ್ಲಿಸಿದ ಮೇಲ್ಮನವಿಯಲ್ಲಾಗಿದೆ ಹೈಕೋರ್ಟ್ ನ ಏಕ ಪೀಠದ ತೀರ್ಪು.
ಮೃತ ಮಹಿಳೆ ಅಡುಗೆ ಮಾಡಿದ್ದಕ್ಕೆ ಅಣಕಿಸಿ, ಅಕ್ಕಪಕ್ಕದವರ ಜತೆ ಮಾತನಾಡದಂತೆ ತಡೆದು, ದೇವಸ್ಥಾನಕ್ಕೆ ಏಕಾಂಗಿಯಾಗಿ ತೆರಳದಂತೆ ತಡೆದು, ಟಿವಿ ನೋಡದಂತೆ ತಡೆದು, ಕಾರ್ಪೆಟ್ ನಲ್ಲಿ ಮಲಗಿಸಿದ್ದಾನೆ ಎಂದು ದೂರಿನಲ್ಲಿ ಯುವಕನ ವಿರುದ್ಧ ಆರೋಪಿಸಲಾಗಿದೆ. ಪತ್ನಿಯನ್ನು ಒಂಟಿಯಾಗಿ ಕಸ ಎಸೆಯಲು ಬಿಡದೆ, ರಾತ್ರಿ ಹೊತ್ತು ನೀರು ತರುವಂತೆ ಹೇಳುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಅಂತಹ ಆರೋಪಗಳನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇವು ಕುಟುಂಬದ ಆಂತರಿಕ ವಿಷಯಗಳಾಗಿವೆ. ಕಾನೂನಿನ ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಮೃತ ಮಹಿಳೆಯ ಗ್ರಾಮಕ್ಕೆ ನಿತ್ಯ ರಾತ್ರಿ ಒಂದುವರೆ ಗಂಟೆಗೆ ನೀರು ಪೂರೈಕೆಯಾಗುತ್ತಿತ್ತು.ಆ ಭಾಗದ ಜನರೆಲ್ಲ ಅದೇ ವೇಳೆ ನೀರು ಸಂಗ್ರಹಿಸುತ್ತಿದ್ದರು. ಹೀಗಾಗಿ ರಾತ್ರಿ ವೇಳೆ ನೀರು ಸಂಗ್ರಹಿಸಲು ಹೇಳುವುದನ್ನು ಅಪರಾಧವಾಗಿ ಕಾಣಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಯ ಆತ್ಮಹತ್ಯೆಗೆ ಮುಂಚಿನ ದಿನಗಳಲ್ಲಿ ಪತಿಯೊಂದಿಗೆ ಯಾವುದೇ ಮಾತುಗಾರಿಕೆ ನಡೆದಿಲ್ಲ ಎಂದು ಮಹಿಳೆಯ ಕುಟುಂಬ ಒಪ್ಪಿಕೊಂಡಿದ್ದರಿಂದ, ಆತ್ಮಹತ್ಯೆಗೆ ಪ್ರಚೋದನೆಯ ಆರೋಪ ನೆಲೆ ನಿಲ್ಲಲು ಸಾಧ್ಯವಿಲ್ಲ ಮತ್ತು ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.