ಭಾರತ-ಚೀನಾ ಬಾಂಧವ್ಯಕ್ಕೆ ವಿಶೇಷ ಮಹತ್ವವಿದ್ದು, ಉಭಯ ದೇಶಗಳ ನಡುವಿನ ದೀರ್ಘಕಾಲದ ಗಡಿ ವಿವಾದ ಬಗೆಹರಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡು ದೇಶಗಳ ನಡುವಿನ ಉತ್ತಮ ಬಾಂಧವ್ಯವು ಪ್ರದೇಶದ ಮತ್ತು ಪ್ರಪಂಚದ ಒಟ್ಟಾರೆ ಅಭಿವೃದ್ಧಿಗೆ ಮುಖ್ಯವಾಗಿದೆ. ನ್ಯೂಸ್‌ವೀಕ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ರಚನಾತ್ಮಕ ಮಾತುಕತೆ ಮೂಲಕ ಚೀನಾದೊಂದಿಗಿನ ಸಂಬಂಧವನ್ನು ಸುಧಾರಿಸುವುದಾಗಿ ಪ್ರಧಾನಿ ಹೇಳಿದರು.
“ಭಾರತಕ್ಕೆ, ಚೀನಾದೊಂದಿಗಿನ ಸಂಬಂಧಗಳು ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿವೆ. ಉಭಯ ದೇಶಗಳ ನಡುವಿನ ಸಂಬಂಧದಲ್ಲಿನ ಬಿರುಕುಗಳನ್ನು ಸರಿಪಡಿಸಲು, ದೀರ್ಘಕಾಲದ ಗಡಿ ವಿವಾದವನ್ನು ಪರಿಹರಿಸಬೇಕಾಗಿದೆ.
ಸ್ಥಿರ ಮತ್ತು ಶಾಂತಿಯುತ ಸಂಬಂಧವು ಈ ಎರಡು ದೇಶಗಳಿಗೆ ಮಾತ್ರವಲ್ಲ, ಏಷ್ಯಾ-ಪೆಸಿಫಿಕ್ ಪ್ರದೇಶ ಮತ್ತು ವಿಶ್ವಕ್ಕೆ ಸಹ ಮುಖ್ಯವಾಗಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕ ಮಾತುಕತೆ ಮೂಲಕ ಗಡಿಗಳಲ್ಲಿ ಶಾಂತಿಯನ್ನು ಪುನಃಸ್ಥಾಪಿಸಬಹುದು ಎಂದು ನಾನು ನಂಬುತ್ತೇನೆ, ”ಎಂದು ಪ್ರಧಾನಿ ಹೇಳಿದರು.
ನಿರಂತರ ಗಡಿ ವಿವಾದಗಳ ನಡುವೆಯೇ ಪ್ರಧಾನಿ ಈ ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಜೂನ್ 2020 ರಲ್ಲಿ, ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಉಂಟಾದಾಗ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟವು. ಮಿಲಿಟರಿ ಮಟ್ಟದ ಮಾತುಕತೆಗಳ ನಂತರವೇ ಗಾಲ್ವಾನ್ ಸಂಘರ್ಷ ವಿರಾಮ ವಾಯಿತು . ಇತ್ತೀಚೆಗೆ ಚೀನಾ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೊಸ ಹೆಸರುಗಳನ್ನು ನೀಡಿ ಸಂಚಲನ ಮೂಡಿಸಿದೆ.
ಚೀನಾ ದ ಅತಿಕ್ರಮಣ ದ ವಿರುದ್ಧ ಮೋದಿ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಪಕ್ಷ ನಾಯಕರು ನಿರಂತರ ಪ್ರಶ್ನಿಸುತ್ತಲೇ ಇದ್ದರು. ಚೀನ ಆಪ್ ಗಳನ್ನು ನಿಷೇಧಿಸುವ ಮೂಲಕ ಕೇಂದ್ರ ಸರಕಾರ ಟ್ರೊಲ್ ಗೊಳಗಾಗಿತ್ತು.
ಇದೀಗ ಚುನಾವಣೆ ಹೊಸ್ತಿಲಲ್ಲಿ ಚೀನಾ ಕುರಿತು ಮೋದಿ ಮೌನ ಮುರಿದಿದ್ದು, ಚರ್ಚೆ ಗೆ ಗ್ರಾಸ ವಾಗಿದೆ.