ಬೆಳ್ತಂಗಡಿ (ಮಾ -12): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಪಕ್ಷ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದೆ.
ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ನವಾಝ್ ಕಟ್ಟೆ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ (2019) ಜಾರಿಗೆ ಬರಲಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಕ್ರಮವನ್ನು ಎಸ್ ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಜನರು ಈ ಕಾನೂನನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದರು.
ಚುನಾವಣಾ ಸೋಲಿನ ಭಯ ಮತ್ತು ಸುಪ್ರೀಂ ಕೋರ್ಟ್ ಬಹಿರಂಗಪಡಿಸಿದ ಚುನಾವಣಾ ಬಾಂಡ್ ಗಳಲ್ಲಿನ ಅಕ್ರಮಗಳಿಂದಾಗಿ ಜನರನ್ನು ವಿಭಜಿಸಲು ಮತ್ತು ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಲು ಚುನಾವಣಾ ಘೋಷಣೆ ಮಾಡುತ್ತಿರುವ ಸಮಯದಲ್ಲಿ ಬಿಜೆಪಿ ಸರ್ಕಾರ ಈ ಘೋಷಣೆ ಮಾಡಿದೆ ಎಂದು ಆರೋಪಿಸಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಂಜಾಲಕಟ್ಟೆ, ಬಂಗೇರಕಟ್ಟೆ, ಪಣಕಜೆ, ಕಡವಿನ ಬಾಗಿಲು, ಕುದ್ರಡ್ಕ, ಅಂಡೆತಡ್ಕ, ಬಾಜಾರು, ಪೆರಲ್ದರ ಕಟ್ಟೆ, ಲಾಯಿಲ, ಬೆಳ್ತಂಗಡಿ ನಗರ ವ್ಯಾಪ್ತಿಯ ಸಂಜಯನಗರ ಕಡೆಗಳಲ್ಲಿ ಮಂಗಳವಾರ ರಾತ್ರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಬಿತ್ತಿಪತ್ರ ಪ್ರದರ್ಶನ ಹಾಗೂ CAA ವಿರುದ್ಧ ಘೋಷಣೆ ಕೂಗುವ ಮೂಲಕ ಎಸ್‌ಡಿಪಿಐ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ನಾಗರೀಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದರು.