janadhvani

Kannada Online News Paper

ಬಡಜನರಿಗೆ ಉಚಿತವಾಗಿ ಉತ್ತಮ ಡಯಾಲಿಸಿಸ್-ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಾರಿ

219 ಕೇಂದ್ರಗಳಲ್ಲಿ ಒಟ್ಟು 800 ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು, ಜ.27: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡಜನರಿಗೆ ಉಚಿತವಾಗಿ ಉತ್ತಮ ಡಯಾಲಿಸಿಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ರಾಜ್ಯ ಆರೋಗ್ಯ ಇಲಾಖೆ ರಾಜ್ಯಾದ್ಯಂತ 800 ಏಕ ಬಳಕೆಯ ಡಯಾಲೈಸರ್ ಗಳ ಕಾರ್ಯಾರಂಭಕ್ಕೆ ಶನಿವಾರ ಚಾಲನೆ ನೀಡಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ಇಂದು(ಜ.27) ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯೊಂದರಲ್ಲೇ 20 ಹೊಸ ಏಕ ಬಳಕೆಯ ಡಯಾಲೈಸರ್‌ ಯಂತ್ರಗಳನ್ನ ಅಳವಡಿಸಲಾಗಿದ್ದು, ಪ್ರತಿನಿತ್ಯ 72 ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುವ ಸಾಮರ್ಥ ಕಲ್ಪಿಸಲಾಗಿದೆ.

ಹಿಂದೆ ಡಯಾಲಿಸಿಸ್ ಕೇಂದ್ರಗಳಲ್ಲಿ ಬಹು ಬಳಕೆಯ ಡಯಾಲೈಸರ್ ಯಂತ್ರಗಳಿಂದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಸೋಂಕು ತಗುಲುತ್ತಿದ್ದದ್ದು ಕಂಡು ಬಂದಿತ್ತು. ಈ ಬಗ್ಗೆ ರಾಜ್ಯದ ಕೆಲವು ಕಡೆಗಳಲ್ಲಿ ದೂರುಗಳು ಸಹ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಡಯಾಲಿಸಿಸ್ ವ್ಯವಸ್ಥೆಯನ್ನು ಆರೋಗ್ಯಕರ ಹಂತಕ್ಕೆ ತರುವಲ್ಲಿ ಕಳೆದ ತಿಂಗಳಿನಿಂದ ಶ್ರಮಿಸಿದ್ದು, ಇದೀಗ ಏಕ ಬಳಕೆಯ ಡಯಾಲೈಸರ್‌ಗಳ ವ್ಯವಸ್ಥೆಗೆ ನಾಂದಿ ಹಾಡಿದ್ದಾರೆ.

ರಾಜ್ಯದ ಇಡೀ ಡಯಾಲಿಸಿಸ್ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ನಿರ್ಧರಿಸಿದ್ದು, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 800 ಹೊಸ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದರು. ಇದೀಗ ಹೊಸ ಡಯಾಲೈಸರ್‌ಗಳ ಅಳವಡಿಕೆ ಕಾರ್ಯ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದಿನಿಂದ ಏಕ ಬಳಕೆಯ ಡಯಾಲಿಸಿಸ್ ಆರೋಗ್ಯ ಸೇವೆ ಆರಂಭವಾಗಿದೆ.

ರಾಜ್ಯದಲ್ಲಿದ್ದ 171 ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ಹೆಚ್ಚಿಸಲಾಗಿದ್ದು, ಹೊಸದಾಗಿ 48 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನ ಆರಂಭಿಸಲಾಗಿದೆ. 219 ಕೇಂದ್ರಗಳಲ್ಲಿ ಒಟ್ಟು 800 ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ವಿಕಬಳಕೆಯ ಡಯಾಲೈಸರ್‌ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದೆ.

ಶನಿವಾರ ಮೊದಲ ಹಂತದಲ್ಲಿ 475 ಏಕ ಬಳಕೆಯ ಡಯಾಲೈಸರ್‌ಗಳು ಕಾರ್ಯ ಆರಂಭಿಸಲಿದ್ದು, ಉಳಿದ ಕೇಂದ್ರಗಳಲ್ಲೂ ಒಂದು ತಿಂಗಳೊಳಗೆ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಸೇವೆ ಆರಂಭವಾಗಲಿದೆ. ಪ್ರತಿಯೊಂದು ಡಯಾಲಿಸಿಸ್ ಸೈಕಲ್‌ಗೆ 1573 ರು.ಗಳು ವೆಚ್ಚವಾಗಲಿದ್ದು, ಸರ್ಕಾರವೇ ವೆಚ್ಚವನ್ನ ಭರಿಸಿ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಿದೆ. 800 ಡಯಾಲಿಸಿಸ್ ಯಂತ್ರಗಳಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನ ಒದಗಿಸಲು ಸಾಮರ್ಥ ಕಲ್ಪಿಸಲಾಗಿದೆ.

error: Content is protected !! Not allowed copy content from janadhvani.com