ಮಂಗಳೂರು: ಮಂಜೇಶ್ವರ ಕಡಪ್ಪುರಂ ನಿವಾಸಿ ಖಾದರ್ (ಕಾಯಿಂಚ) ಎಂಬವರು ಇಂದು ಬೆಳಿಗ್ಗೆ ಮಂಗಳೂರಿನ ತಾರಾ ಕ್ಲಿನಿಕ್ ನಲ್ಲಿ ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಗೋದಾಮೊಂದರಲ್ಲಿ ಇರಿಸಿ ಅವಮಾನಿಸಲಾಗಿದೆ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದ ಕಾರಣ ಕಳೆದ ಒಂದು ವಾರದಿಂದ ಮಂಗಳೂರಿನ ತಾರಾ ಕ್ಲಿನಿಕ್ ನಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾಯಿಞ್ಞಿ ಎಂಬವರು ನೆರೆ ರಾಜ್ಯ ಕೇರಳದ ಗಡಿನಾಡು ಮಂಜೇಶ್ವರ ಕಡಪ್ಪುರಂ ನಿವಾಸಿಯಾಗಿದ್ದಾರೆ.
ಮೃತ ಶರೀರವನ್ನು ಅವಮಾನಿಸಿದ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ವಿಚಾರಿಸಿದಾಗ “ಇಲ್ಲಿ ಇಷ್ಟೇ ಸೌಕರ್ಯ ಇರುವುದು, ಬೇಕಾದರೆ ಕೊಂಡೊಯ್ಯಿರಿ” ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಇಂತಹಾ ಅಮಾನವೀಯ ಕೃತ್ಯ ನಡೆದಿರುವುದಕ್ಕೆ ಕನ್ನಡಿಗರು ತಲೆತಗ್ಗಿಸುವಂತಾಗಿದೆ.
ಕೇರಳದ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮುಂತಾದ ಜಿಲ್ಲೆಗಳ ಬಹುತೇಕ ಮಂದಿ ಕರ್ನಾಟಕದ ಮಂಗಳೂರಿನ ವಿವಿಧ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದಾರೆ. ಮಂಗಳೂರಿನ ಕೆಲವು ಆಸ್ಪತ್ರೆಗಳು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತಗೊಂಡು ಕಾರ್ಯಾಚರಿಸುತ್ತಿರುವುದು ನಿಜಕ್ಕೂ ಖಂಡನೀಯ. ಈ ಬಗ್ಗೆ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.