ರಿಯಾದ್: ವಿದೇಶಿಯರಿಗೆ ಸ್ಥಳೀಯ ಪ್ರಾಯೋಜಕರಿಲ್ಲದೆ ಸೌದಿ ಅರೇಬಿಯಾದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ವ್ಯಾಪಾರವನ್ನು ಪ್ರಾರಂಭಿಸಲು ಸ್ವಾತಂತ್ರ್ಯವನ್ನು ನೀಡುವ ಪ್ರೀಮಿಯಂ ಇಖಾಮಾ (ರೆಸಿಡೆನ್ಸಿ ಪರ್ಮಿಟ್) ಈಗ ಹೆಚ್ಚಿನ ವರ್ಗದ ವಿದೇಶಿಯರಿಗೆ ಲಭ್ಯವಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿನ ಗ್ರೀನ್ ಕಾರ್ಡ್‌ನಂತೆಯೇ ಪ್ರೀಮಿಯಂ ರೆಸಿಡೆನ್ಸಿ ಪರವಾನಗಿಗಾಗಿ ಐದು ವರ್ಗಗಳಲ್ಲಿ ಒಳಪಟ್ಟ ವಿದೇಶಿಯರು ಅರ್ಜಿ ಸಲ್ಲಿಸಬಹುದು ಎಂದು ಪ್ರೀಮಿಯಂ ರೆಸಿಡೆನ್ಸಿ ಸೆಂಟರ್ ಅಧ್ಯಕ್ಷ ಮತ್ತು ವಾಣಿಜ್ಯ ಸಚಿವ ಡಾ. ಮಜೀದ್ ಬಿನ್ ಅಬ್ದುಲ್ಲಾ ಅಲ್-ಖಸಬಿ ತಿಳಿಸಿದ್ದಾರೆ.
ಆ ಐದು ವರ್ಗಗಳೆಂದರೆ, ಆಡಳಿತ, ಆರೋಗ್ಯ, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅನುಭವವನ್ನು ಹೊಂದಿರುವರು, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರತಿಭೆ ತೋರಿದವರು, ವ್ಯಾಪಾರ ಹೂಡಿಕೆದಾರರು, ಕೈಗಾರಿಕೋದ್ಯಮಿಗಳು ಮತ್ತು ರಿಯಲ್ ಎಸ್ಟೇಟ್ ಮಾಲೀಕರು.
ಪ್ರೀಮಿಯಂ ಇಕಾಮಾ ವ್ಯವಸ್ಥೆಯು 2019 ರಲ್ಲಿ ಅಸ್ತಿತ್ವಕ್ಕೆ ಬಂತು. ಇದು ವಿದೇಶಿಯರಿಗೆ ಸೌದಿ ಅರೇಬಿಯಾದಲ್ಲಿ ಸ್ಥಳೀಯ ಪ್ರಾಯೋಜಕರ ಅಗತ್ಯವಿಲ್ಲದೆ ವಾಸಿಸುವ, ಕೆಲಸ ಮಾಡುವ, ವ್ಯಾಪಾರ ಮತ್ತು ಆಸ್ತಿಯನ್ನು ಹೊಂದುವ ಹಕ್ಕನ್ನು ನೀಡಿತ್ತು.
ಇದು ಹೆಂಡತಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಪೋಷಕರಿಗೆ ಸೌದಿ ಅರೇಬಿಯಾದಲ್ಲಿ ತಮ್ಮದೇ ಆದ ಪ್ರಾಯೋಜಕತ್ವದಲ್ಲಿ ಉಳಿಯಲು, ಸ್ವತಂತ್ರವಾಗಿ ಕೆಲಸ ಮಾಡಲು, ರೀಎಂಟ್ರಿ ಇಲ್ಲದೆ ದೇಶವನ್ನು ತೊರೆದು ಮರುಪ್ರವೇಶಿಸುವ ಸ್ವಾತಂತ್ರ್ಯವನ್ನು ನೀಡುವ ವಾರ್ಷಿಕ ನವೀಕರಣದ ಆಧಾರದ ಮೇಲೆ ಮತ್ತು ಅನಿರ್ದಿಷ್ಟಾವಧಿಯ ಎರಡು ರೀತಿಯ ಇಖಾಮಾವನ್ನು ಪರಿಚಯಿಸಲಾಗಿತ್ತು.
ಅನಿರ್ದಿಷ್ಟ ಅವಧಿಗೆ ಇಖಾಮಾ ಶುಲ್ಕ ಎಂಟು ಲಕ್ಷ ರಿಯಾಲ್ ಆಗಿತ್ತು. ಪ್ರತಿ ವರ್ಷ ನವೀಕರಿಸಲು ಇಖಾಮಾಗೆ ವಾರ್ಷಿಕ ಶುಲ್ಕ 1 ಲಕ್ಷ ರಿಯಾಲ್ ಆಗಿತ್ತು. ಇದೀಗ ಪ್ರೀಮಿಯಂ ಇಕಾಮಾ ಶ್ರೇಣಿಯಲ್ಲಿ ಐದು ಹೊಸ ವಿಭಾಗಗಳನ್ನು ಸೇರಿಸಲಾಗಿದೆ. ಈ ವರ್ಗಗಳ ಅಡಿಯಲ್ಲಿ ವೈಯಕ್ತಿಕ ಇಕಾಮಾವನ್ನು ಪಡೆಯಲು ಪಾವತಿಸಬೇಕಾದ ಶುಲ್ಕ 4,000 ರಿಯಾಲ್‌ಗಳು. ಅವಧಿ ಐದು ವರ್ಷಗಳಾಗಿವೆ.