ರಿಯಾದ್: ತಿರುವನಂತಪುರದ ವಿತೂರ ನಿವಾಸಿ ರಶೀದ್ ಸೌದಿ ಅರೇಬಿಯಾದಲ್ಲಿ ಎರಡೂವರೆ ವರ್ಷಗಳ ಸೆರೆವಾಸದಿಂದ ಬಿಡುಗಡೆಗೊಂಡು ತಾಯಿನಾಡು ತಲುಪಿದ್ದಾರೆ. ನಕಲಿ ಸಮಾಜಸೇವಕನಾಗಿದ್ದ ತನ್ನ ಸ್ನೇಹಿತನ ಮಾತು ಕೇಳಿ ರಶೀದ್ ಜೈಲು ಪಾಲಾದ.
ನಾಲ್ಕು ವರ್ಷಗಳ ಹಿಂದೆ ಹೌಸ್ ಡ್ರೈವರ್ ವೀಸಾದ ಮೇಲೆ ರಶೀದ್ ಜಿದ್ದಾಕ್ಕೆ ಬಂದಿದ್ದರು. ಆದರೆ ಸ್ಥಳೀಯ ಪ್ರಾಯೋಜಕರು ರಶೀದ್ ಅವರನ್ನು ತನ್ನ ಬಿಡಿಭಾಗಗಳ ಅಂಗಡಿಯಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದರು. ದೇಶೀಕರಣ ತೀವ್ರಗೊಂಡು ತಪಾಸಣೆ ಬಿಗಿಗೊಳಿಸಿದಾಗ ರಶೀದ್ ಜೀವನವನ್ನೇ ಬದಲಿಸಿದ ಘಟನೆ ನಡೆದಿದೆ. ಸ್ಥಳೀಯರನ್ನು ನೇಮಿಸಿಕೊಳ್ಳಬೇಕಾದ ಪೋಸ್ಟ್‌ನಲ್ಲಿ ವಿದೇಶಿಯನ್ನು ನೋಡಿದ ಪೊಲೀಸರು, ಮುಂದಿನ ಬಾರಿ ಪರಿಶೀಲಿಸುವ ವೇಳೆ ಮತ್ತೆ ಇಲ್ಲಿ ಕಂಡಲ್ಲಿ ಬಂಧಿಸುವುದಾಗಿ ರಶೀದ್‌ಗೆ ಎಚ್ಚರಿಕೆ ನೀಡಿದರು.
ಇದನ್ನು ಕೇಳಿದ ರಶೀದ್ ತನ್ನ ಕೆಲಸದ ಸ್ಥಳವನ್ನು ತೊರೆದು ತನ್ನ ಸ್ನೇಹಿತನನ್ನು ಆಶ್ರಯಿಸಿದರು. ಪಾಸ್‌ಪೋರ್ಟ್ ಪ್ರಾಯೋಜಕರ ಬಳಿ ಇದ್ದುದರಿಂದ ತಕ್ಷಣ ಮನೆಗೆ ತೆರಳಲು ಶಾನ್ ಎಂಬ ನಕಲಿ ಸಾಮಾಜಿಕ ಕಾರ್ಯಕರ್ತ ನೀಡಿದ ಸಲಹೆಯು ರಶೀದ್ ಗೆ ಜೈಲುವಾಸ ಲಭಿಸುವಂತಾಯಿತು. ಜಿದ್ದಾದಲ್ಲಿರುವ ಗಡೀಪಾರು ಕೇಂದ್ರವನ್ನು ಸಂಪರ್ಕಿಸಿದರೆ, ಮೂರು ದಿನಗಳಲ್ಲಿ ಜೈಲುವಾಸ ಅನುಭವಿಸಿ ಮನೆಗೆ ಮರಳಬಹುದು ಎಂದು ನಂಬಿಸಿ ರಶೀದ್‌ನಿಂದ 4000 ರಿಯಾಲ್ ಪಡೆದ ಶಾನ್ ನಾಪತ್ತೆಯಾಗಿದ್ದಾನೆ.
ಈ ನಡುವೆ ರಶೀದ್ ಪರಾರಿಯಾಗಿದ್ದಾನೆ ಎಂದು ಪ್ರಾಯೋಜಕರು ದೂರು ನೀಡಿದ್ದರು. ಇನ್ನು ಮೂರು ದಿನದಲ್ಲಿ ಮನೆಗೆ ಮರಳುತ್ತೇನೆ ಎಂದುಕೊಂಡಿದ್ದ ರಶೀದ್ 28 ತಿಂಗಳು ಜೈಲು ವಾಸ ಅನುಭವಿಸಿದರು. ಏತನ್ಮಧ್ಯೆ, ರಶೀದ್ ಅವರನ್ನು ಜಿದ್ದಾದಿಂದ ರಿಯಾದ್ ಜೈಲಿಗೆ ವರ್ಗಾಯಿಸಲಾಯಿತು.
ಜೈಲಿನಿಂದ ಬಿಡುಗಡೆಗಾಗಿ ರಶೀದ್ ಪೋಷಕರು ವಿವಿಧ ಕೇಂದ್ರಗಳನ್ನು ಸಂಪರ್ಕಿಸಿದರು, ಆದರೆ ಫಲಿತಾಂಶವು ನಿರಾಶಾದಾಯಕವಾಗಿತ್ತು. ನಂತರ ಈ ವಿಷಯವನ್ನು ಲುಲು ಗ್ರೂಪ್ ಚೇರ್ಮ್ಯಾನ್ ಎಂ.ಎ. ಯೂಸುಫಲಿ ಅವರ ಗಮನಕ್ಕೆ ತಂದ ಫಲವಾಗಿ ರಶೀದ್ ರಿಗೆ ಬಿಡುಗಡೆ ಭಾಗ್ಯ ಲಭಿಸಿದೆ.
ರಿಯಾದ್ ಲುಲು ಗ್ರೂಪ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಇದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಸಮಸ್ಯೆಗಳು ಬಗೆಹರಿದ ನಂತರ ಸೌದಿ ನ್ಯಾಯಾಲಯವು ರಶೀದ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದೆ. ಕಳೆದ ಶನಿವಾರ ರಾತ್ರಿ ರಿಯಾದ್‌ನಿಂದ ಮುಂಬೈ ಮೂಲಕ ಇಂಡಿಗೋ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸಿದ ರಶೀದ್ ಅವರನ್ನು ಸಹೋದರ ರಮೀಝ್ ಮತ್ತು ಇತರ ಸಂಬಂಧಿಕರು ಬರಮಾಡಿಕೊಂಡರು. ಅಣ್ಣನ ಬಿಡುಗಡೆಗೆ ಶ್ರಮಿಸಿದ ಎಂ.ಎ.ಯೂಸುಫಲಿ ಮತ್ತು ಲುಲು ಗ್ರೂಪ್ ರಿಯಾದ್ ಕಚೇರಿಗೆ ರಮೀಝ್ ಧನ್ಯವಾದ ಸಲ್ಲಿಸಿದರು.