ಗಾಝಾ: ಅಲ್-ಅಹ್ಲಿ ಆಸ್ಪತ್ರೆಯ ನಂತರ, ಇಸ್ರೇಲ್ ಮತ್ತೆ ಗಾಝಾದ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡಿದೆ. ಗಾಝಾ ಪಟ್ಟಿಯಲ್ಲಿರುವ ಅಲ್-ಖುದುಸ್ ಆಸ್ಪತ್ರೆಯ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲಿ ಪಡೆಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಪ್ಯಾಲೆಸ್ಟೈನ್ ರೆಡ್ ಕ್ರೆಸೆಂಟ್ ಸೊಸೈಟಿ (PRCS) ಮಾಹಿತಿ ಬಿಡುಗಡೆ ಮಾಡಿದೆ.
ಈ ಹಿಂದೆ ಅಲ್ ಅಹ್ಲಿ ಅರಬ್ ಆಸ್ಪತ್ರೆಗೆ ಆದೇಶ ನೀಡಿದಂತೆ, ಅಲ್-ಖುದುಸ್ ಆಸ್ಪತ್ರೆಯನ್ನು ಆದಷ್ಟು ಬೇಗ ಸ್ಥಳಾಂತರಿಸುವಂತೆ ಇಸ್ರೇಲ್ ಅಂತಿಮ ಆದೇಶ ನೀಡಿದೆ. ಇಸ್ರೇಲ್ ಆಕ್ರಮಣದಿಂದ ನಿರಾಶ್ರಿತರಾದ ಸುಮಾರು 12,000 ಜನರು ಈ ಆಸ್ಪತ್ರೆಯಲ್ಲಿ ವಾಸಿಸುತ್ತಿದ್ದಾರೆ. ಶೇ.70 ರಷ್ಟು ಮಕ್ಕಳು ಮತ್ತು ಮಹಿಳೆಯರು. ಇಸ್ರೇಲ್‌ನ ಬೆದರಿಕೆಯ ಹಿನ್ನೆಲೆಯಲ್ಲಿ ಇವರ ಜೀವಕ್ಕೆ ಅಪಾಯವಿದೆ ಎಂದು PRCS ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.
“ಈ ಬೆದರಿಕೆ ನಿಜವಾದಲ್ಲಿ, ಈ ಸ್ಥಳವು ಬೂದಿಯಾಗಲಿದೆ.ಅಮಾಯಕ ನಾಗರಿಕರು ವಾಸಿಸುವ ಆಸ್ಪತ್ರೆಗಳಿಗೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕುವ ಇಸ್ರೇಲಿ ಆಕ್ರಮಣ ಪಡೆಗಳನ್ನು ತಡೆಯುವ ಯಾವುದೇ ವಿಶ್ವ ಶಕ್ತಿ ಇಲ್ಲವೇ? ಅಲ್-ಅಹ್ಲಿ ಆಸ್ಪತ್ರೆಯಂತೆಯೇ ಮತ್ತೊಂದು ದುರಂತ ಮರುಕಳಿಸದಂತೆ ಅಂತಾರಾಷ್ಟ್ರೀಯ ಸಮುದಾಯವು ತುರ್ತಾಗಿ ಮಧ್ಯಪ್ರವೇಶಿಸಬೇಕು”-ರೆಡ್ ಕ್ರೆಸೆಂಟ್ ಆಗ್ರಹಿಸಿದೆ.
ಕೆಲವು ದಿನಗಳ ಹಿಂದೆ, ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 500ಕ್ಕೂ ಮಿಕ್ಕ ಜನರು ಮೃತಪಟ್ಟಿದ್ದಾರೆ. ಆದರೆ, ದಾಳಿಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಜಿಹಾದ್‌ನ ರಾಕೆಟ್‌ಗಳು ದಿಕ್ಚ್ಯುತಿಗೊಂಡು ಆಸ್ಪತ್ರೆಯನ್ನು ಹೊಡೆದವು ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ,ಇದನ್ನು ಸಾಬೀತುಪಡಿಸಲು ಪುರಾವೆಯನ್ನು ಪ್ರಸ್ತುತಪಡಿಸಲು ಅವರಿಗೆ ಸಾಧ್ಯವಾಗಿಲ್ಲ.