ರಿಯಾದ್: ಅರಬ್ ರಾಷ್ಟ್ರಗಳ ಒಕ್ಕೂಟವಾದ ಅರಬ್ ಲೀಗ್‌ನ ತುರ್ತು ಸಭೆಯು ಗಾಝಾದಲ್ಲಿ ಇಸ್ರೇಲ್ ಹಿಂಸಾಚಾರವನ್ನು ನಿಲ್ಲಿಸುವಂತೆ ಒತ್ತಾಯಿಸಿದೆ. ಕೈರೋದಲ್ಲಿ ನಡೆದ ವಿದೇಶಾಂಗ ಮಂತ್ರಿಗಳ ಸಭೆಯು ಗಾಝಾಕ್ಕೆ ನೆರವು ತರಲು ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೆ ಕರೆ ನೀಡಿತು.
ಪ್ಯಾಲೆಸ್ತೀನ್‌ನ ಕೋರಿಕೆಯ ಮೇರೆಗೆ ಅರಬ್ ಲೀಗ್‌ನ ತುರ್ತು ಸಭೆಯನ್ನು ಕರೆಯಲಾಗಿತ್ತು.ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ಸೇರಿದಂತೆ 22 ದೇಶಗಳ ಒಕ್ಕೂಟವಾಗಿದೆ ಅರಬ್ ಲೀಗ್. ಈ ಸಮ್ಮೇಳನದಲ್ಲಿ ಪ್ಯಾಲೆಸ್ತೀನ್ ಪರವಾಗಿ ನಿರ್ಣಯ ಅಂಗೀಕರಿಸಲಾಯಿತು. ಇಸ್ರೇಲ್ ತನ್ನ ಬಾಂಬ್ ದಾಳಿಯನ್ನು ಕೊನೆಗೊಳಿಸಲು ಮತ್ತು ಗಾಝಾಕ್ಕೆ ನೆರವು ತರಲು ಅಂತರರಾಷ್ಟ್ರೀಯ ಒತ್ತಡವನ್ನು ಹಾಕಲು ಸಭೆ ನಿರ್ಧರಿಸಿತು.
ಗಾಜಾಕ್ಕೆ ಆಹಾರ, ನೀರು ಮತ್ತು ಔಷಧವನ್ನು ತಲುಪಿಸಲು ಪ್ರಯತ್ನಗಳು ಮುಂದುವರಿಯುತ್ತವೆ. ಎರಡೂ ಕಡೆಯವರನ್ನು ಶಾಂತಿ ಮಾತುಕತೆಗೆ ಕರೆತರಲು ಮತ್ತು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ಸಭೆ ನಿರ್ಧರಿಸಿತು.
ಇಸ್ರೇಲ್ ದಾಳಿ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಮೊದಲ ಬಾರಿಗೆ ಮಾತುಕತೆ ನಡೆಸಿದರು. ಚೀನಾದ ಮಧ್ಯಸ್ಥಿಕೆಯಲ್ಲಿ ಇರಾನ್-ಸೌದಿ ಸಂಬಂಧಗಳನ್ನು ಪುನಃಸ್ಥಾಪಿಸಿದ ನಂತರ ಉಭಯ ದೇಶಗಳ ನಾಯಕರು ಮಾತನಾಡುತ್ತಿರುವುದು ಇದೇ ಮೊದಲು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಸಮಸ್ಯೆ ಪರಿಹಾರಕ್ಕಾಗಿ ಎರಡೂ ದೇಶ ಒಗ್ಗಟ್ಟಾಗಿ ಕೆಲಸಮಾಡುವುದಾಗಿ ಹೇಳಿದರು.
ಇದಕ್ಕೂ ಮುನ್ನ, ಕ್ರೌನ್ ಪ್ರಿನ್ಸ್ ಟರ್ಕಿಯ ಅಧ್ಯಕ್ಷರೊಂದಿಗೂ ಚರ್ಚಿಸಿದ್ದರು.ಸೌದಿ ಅರೇಬಿಯಾ ಪ್ಯಾಲೆಸ್ತೀನ್ ಜೊತೆಗಿನ ಸಹಕಾರವನ್ನು ಮುಂದುವರಿಸಲಿದೆ ಮತ್ತು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ಅವರೊಂದಿಗೆ ಇರುವುದಾಗಿ ಇರಾನ್ ಮತ್ತು ಟರ್ಕಿಯೊಂದಿಗೆ ಸೌದಿ ಕ್ರೌನ್ ಪ್ರಿನ್ಸ್ ಪುನರುಚ್ಚರಿಸಿದರು.ಸಮಸ್ಯೆಯನ್ನು ಪರಿಹರಿಸಲು ಸಮನ್ವಯವು ಮುಂದುವರಿಯುತ್ತದೆ ಎಂದು ಸೌದಿ ಹೇಳಿದೆ. ಇದರೊಂದಿಗೆ, ಅರಬ್ ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚು ಸಂಘಟಿತ ಒತ್ತಡದ ಪ್ರಯತ್ನ ನಡೆಯುತ್ತಿದೆ. ಆದರೆ ಭೂಮಾರ್ಗದ ಮೂಲಕ ಗಾಜಾವನ್ನು ಪ್ರವೇಶಿಸುವ ಅವಕಾಶಕ್ಕಾಗಿ ಇಸ್ರೇಲ್ ಕಾಯುತ್ತಿದೆ.