ರಿಯಾದ್: ಸೌದಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಶಿಕ್ಷಾರ್ಹ ಅಪರಾಧ ಎಂದು ಅಧಿಕಾರಿಗಳು ನೆನಪಿಸಿದ್ದಾರೆ. ಧ್ವಜವನ್ನು ಅಪವಿತ್ರಗೊಳಿಸಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜವನ್ನು ವ್ಯಾಪಕವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರಧ್ವಜವನ್ನು ಬಳಸುವಾಗ ನಿಯಮಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಗೃಹ ವ್ಯವಹಾರಗಳ ಸಚಿವಾಲಯ ನೆನಪಿಸಿದೆ. ಹಳೆಯ, ಬಣ್ಣ ಮಂಕಾದ ಅಥವಾ ಕಳಪೆ ಗುಣಮಟ್ಟದ ಧ್ವಜವನ್ನು ಎಲ್ಲಿಯೂ ಬಳಸಬಾರದು. ಟ್ರೇಡ್‌ಮಾರ್ಕ್ ಅಥವಾ ವಾಣಿಜ್ಯ ಜಾಹೀರಾತಿಗಾಗಿ ಫ್ಲ್ಯಾಗನ್ನು ಬಳಸುವುದನ್ನು ಸಹ ನಿಷೇಧಿಸಲಾಗಿದೆ. ಅಲ್ಲದೆ ರಾಷ್ಟ್ರಧ್ವಜವನ್ನು ಬಳಸಿ ಯಾವುದೇ ವಸ್ತುಗಳನ್ನು ಕಟ್ಟುವುದು ಅಥವಾ ಒಯ್ಯುವುದು ನಿಷೇಧ.
ಪ್ರಾಣಿಗಳ ಮೇಲೆ ಅಳವಡಿಸುವುದು ಅಥವಾ ಮುದ್ರಿಸುವುದನ್ನು ನಿಷೇಧಿಸಲಾಗಿದೆ. ಧ್ವಜದ ಅವಹೇಳನಕಾರಿ ಅಥವಾ ಕೇಡಾಗುವ ರೀತಿಯ ಬಳಕೆಗಳು ಮತ್ತು ಬಳಸಿದ ನಂತರ ಎಸೆಯುವ ಸಾಧ್ಯತೆಯಿರುವ ವಸ್ತುಗಳ ಮೇಲೆ ಮುದ್ರಿಸುವುದು ಅಪರಾಧಗಳಾಗಿವೆ.
ಧ್ವಜವನ್ನು ಹಾಳು ಮಾಡಬಾರದು ಅಥವಾ ಕೊಳಕು ಸ್ಥಳಗಳಲ್ಲಿ ಇಡಬಾರದು. ಮತ್ತು ಅದಕ್ಕೆ ಪಠ್ಯ, ಘೋಷಣೆಗಳು ಅಥವಾ ರೇಖಾಚಿತ್ರಗಳನ್ನು ಸೇರಿಸಬಾರದು. ಧ್ವಜವನ್ನು ನೆಲದ ಮೇಲೆ ಇಡುವುದು, ನಿಂದಿಸುವುದು ಮತ್ತು ಅವಮಾನಿಸುವುದು ರಾಷ್ಟ್ರೀಯ ಧ್ವಜ ಕಾಯ್ದೆಯಡಿ ಅಪರಾಧ ಎಂದು ಗೃಹ ಸಚಿವಾಲಯ ಎಚ್ಚರಿಸಿದೆ.