ಕೋಝಿಕ್ಕೋಡ್: ನಿಪಾ ವೈರಸ್ ಬಗ್ಗೆ ಕೇರಳ ಅಲರ್ಟ್ ಆಗಿದೆ. ಈ ವೈರಸ್‌ನಿಂದ ರಾಜ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ ದೃಢಪಟ್ಟಿದೆ. “ನಮ್ಮ ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೃತರಿಬ್ಬರೂ ಕೋಝಿಕ್ಕೋಡ್ ನಿವಾಸಿಗಳು ಎಂದು ವರದಿಯಾಗಿದೆ. ವೈರಸ್ ಸೋಂಕಿತರಲ್ಲಿ ಒಂಬತ್ತು ವರ್ಷದ ಬಾಲಕನೂ ಸೇರಿದ್ದಾನೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಿಪಾ ಪರೀಕ್ಷೆ ಮತ್ತು ಬಾವಲಿಗಳ ಸಮೀಕ್ಷೆಯನ್ನು ಕೈಗೊಳ್ಳಲು ಮೊಬೈಲ್ ಲ್ಯಾಬ್ ಅನ್ನು ಸ್ಥಾಪಿಸಲಿವೆ ಎಂದು ಕೇರಳ ಸರ್ಕಾರ ಬುಧವಾರ ಅಲ್ಲಿನ ವಿಧಾನಸಭೆಗೆ ತಿಳಿಸಿದೆ.
ವಿಧಾನಸಭೆಯಲ್ಲಿ ನಿಪಾ ಸೋಂಕಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೇರಳದಲ್ಲಿ ಪತ್ತೆಯಾಗಿರುವ ನಿಪಾ ವೈರಸ್ ಬಾಂಗ್ಲಾದೇಶದಲ್ಲಿ ಕಂಡುಬಂದ ರೂಪಾಂತರ ತಳಿಯಾಗಿದ್ದು, ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಕಡಿಮೆ ಸಾಂಕ್ರಾಮಿಕವಾಗಿದ್ದರೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದು ತಿಳಿಸಿದ್ಧಾರೆ.
ಏಳು ಗ್ರಾಮ ಪಂಚಾಯಿತಿಗಳು ಕಂಟೇನ್ಮೆಂಟ್ ಝೋನ್
ಈ ಸೋಂಕನ್ನು ನಿಯಂತ್ರಿಸಲು, ಕೋಝಿಕ್ಕೋಡ್ ಆಡಳಿತವು ಏಳು ಗ್ರಾಮ ಪಂಚಾಯತ್‌ಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಿದೆ. ಕಂಟೈನ್‌ಮೆಂಟ್ ಝೋನ್ ಘೋಷಣೆ ಮಾಡುವುದರಿಂದ ಈ ಗ್ರಾಮ ಪಂಚಾಯಿತಿಗಳ ಜನರು ಮಿತಿ ಮೀರಿ ಹೋಗುವಂತಿಲ್ಲ.
ಮೆಡಿಕಲ್ ಸ್ಟೋರ್ ಮಾತ್ರ ತೆರೆಯಲು ಅನುಮತಿ
ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದು, ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿರುವ ಪಂಚಾಯತ್‌ಗಳಲ್ಲಿ ಅತಂಚೇರಿ, ಮಾರುತೋಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲೈಪಲ್ಲಿ ಮತ್ತು ಕವಿಲುಂಪಾರ ಸೇರಿವೆ. ಈ ಪ್ರದೇಶಗಳನ್ನು ಸುತ್ತುವರಿಯಲು ಪೊಲೀಸರನ್ನು ಕೇಳಲಾಗಿದೆ ಎಂದು ಅವರು ಮಂಗಳವಾರ ಹೇಳಿದರು. ಆದೇಶದ ಪ್ರಕಾರ, ಅಗತ್ಯ ವಸ್ತುಗಳು ಮತ್ತು ಮೆಡಿಕಲ್ ಸ್ಟೋರ್‌ಗಳನ್ನು ಮಾತ್ರ ತೆರೆಯಲು ಅನುಮತಿಸಲಾಗಿದೆ.
ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಅಂಗಡಿ ತೆರೆಯಲು ಅನುಮತಿ
ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ತೆರೆಯಲು ಅನುಮತಿಸಲಾಗಿದೆ ಎಂದು ಡಿಎಂ ಆದೇಶಿಸಿದರು. ಔಷಧಾಲಯಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಯಾವುದೇ ಸಮಯದ ಮಿತಿಯನ್ನು ನೀಡಲಾಗಿಲ್ಲ. ಆದೇಶದ ಪ್ರಕಾರ, ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಮ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಬ್ಯಾಂಕ್‌ಗಳು, ಇತರ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿಗಳು ಕಾರ್ಯನಿರ್ವಹಿಸಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು. ಹಾಗೆಯೇ ಸಾರ್ವಜನಿಕರು ಆನ್‌ಲೈನ್ ಸೇವೆಗಳನ್ನು ಬಳಸಲು ಸೂಚಿಸಲಾಗಿದೆ.
ಮಂಗಳವಾರ ಕೋಝಿಕ್ಕೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ , ವೈರಸ್‌ಗಾಗಿ ಪರೀಕ್ಷಿಸಲಾದ ಐದು ಮಾದರಿಗಳಲ್ಲಿ ಮೂರು ಪಾಸಿಟಿವ್ ಎಂದು ಪರೀಕ್ಷಿಸಲಾಗಿದೆ ಎಂದು ಹೇಳಿದರು.