✍️ಡಿ.ಐ. ಅಬೂಬಕರ್ ಕೈರಂಗಳ
ಈ ಸಮಾವೇಶ ನಡೆದ ಬಳಿಕ ಎಸೆಸೆಫ್ ಹೆಚ್ಚು ಪ್ರಸ್ತುತಿ ಹಾಗೂ ವ್ಯಾಪಕ ಪ್ರಚಾರ ಪಡೆಯತೊಡಗಿದೆ. ಕರ್ನಾಟಕ ಸರಕಾರ ಕೂಡಾ ಎಸೆಸೆಫಿನ ಶಿಸ್ತಿನ ಬಗ್ಗೆ ಅಚ್ಚರಿಗೊಂಡಿದೆ. ಲಕ್ಷಾಂತರ ಜನರು ಸೇರುವ ಒಂದು ಸಮಾವೇಶದಲ್ಲಿ ಏನಾದರೂ ಅಲ್ಲರೆ ಚಿಲ್ಲರೆ ಅಹಿತಕರ ಘಟನೆಗಳು ನಡೆಯುವುದು ಸಹಜ.ಆದರೆ, ಎಸೆಸೆಫ್ ಗೋಲ್ಡನ್ ಫಿಫ್ಟಿ ಸಮಾವೇಶದಲ್ಲಿ ಕಂಡ ಅದ್ಬುತ ಶಿಸ್ತು ಅತ್ಯದ್ಭುತವಾಗಿತ್ತು.
ಯಾವುದೇ ಸಭೆ ಇರಲಿ, ಮಳೆ ಸುರಿದಾಗ ಚೆಲ್ಲಾಪಿಲ್ಲಿಯಾಗುವುದು ಸಹಜ. ಆದರೆ ಬೆಂಗಳೂರಲ್ಲಿ ಮೊನ್ನೆ ನಡೆದ ಮಹಾ ಸಮಾವೇಶದಲ್ಲಿ ಮಳೆ ಸುರಿದಾಗ ಯಾವುದೇ ಒಬ್ಬ ವ್ಯಕ್ತಿ ಕೂಡಾ ವಿಚಲಿತವಾಗದೆ ಅಚಲವಾಗಿ ಕೂತ ದೃಶ್ಯವು ನೋಡುಗರನ್ನು ನಿಬ್ಬೆರಗಾಗಿಸಿತ್ತು. ಇಂತಹ ಶಿಸ್ತಿನ ಸಿಪಾಯಿಗಳನ್ನು ರೂಪಿಸಿದ ಸುಲ್ತಾನುಲ್ ಉಲಮಾರವರನ್ನು ರಾಜ್ಯ ಸರಕಾರ ಅತಿಥಿಯಾಗಿ ಪರಿಗಣಿಸಿ ಸರಕಾರೀ ವಾಹನ, ಗೆಸ್ಟ್ ಹೌಸ್ ಹಾಗೂ ಸೆಕ್ಯೂರಿಟಿ ಕೊಟ್ಟು ಗೌರವಿಸಿದ್ದು ಸಾರ್ಥಕವೆನಿಸಿತ್ತು. ಕರ್ನಾಟಕ ಸರಕಾರವು ಎಪಿ ಉಸ್ತಾದರಿಗೆ ನೀಡಿದ ಈ ಗೌರವಕ್ಕೆ ಸಮರ್ಥನೆಯಂತಾಗಿತ್ತು ಲಕ್ಷಾಂತರ ಎಸೆಸೆಫ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ನಡವಳಿಕೆ.
ಕಾಶ್ಮೀರದಿಂದ ಹೊರಟ ಎಸೆಸೆಫ್ ನ ಸಂವಿಧಾನ್ ಯಾತ್ರೆ ಕೂಡಾ ಬೆಂಗಳೂರು ತನಕ ಯಾರಿಗೂ ಯಾವುದೇ ಆತಂಕ ಇಲ್ಲದ ಹಾಗೆ ಬೆಂಗಳೂರಲ್ಲಿ ಸಮಾಪ್ತಿಗೊಂಡಿತ್ತು. ಕೆಟ್ಟ ಘೋಷಣೆಯಿಲ್ಲ, ಉದ್ರೇಕಕಾರಿ ನುಡಿಗಳಿಲ್ಲ, ನಿಂದನೆಗಳಿಲ್ಲ. ಎಲ್ಲವೂ ಶಾಂತ ಸುಂದರ. ಶಿಕ್ಷಣವೇ ಮುಖ್ಯವಾಗಿದ್ದು ಮಾನವೋದ್ಧಾರದ ಮೂಲ ಸೂತ್ರವೇ ಶಿಕ್ಷಣ ಎಂಬ ಆಶಯದಲ್ಲಿ ತಳಸ್ಪರ್ಶಿಯಾಗಿ ನಿಂತಿರುವ ಎಸೆಸೆಫ್ ಆ ವಿಷಯಕ್ಕೆ ಮಾತ್ರ ಒತ್ತು ಕೊಡುತ್ತಾ ಬರುತ್ತಿದೆ.
ಈ ಸಮಾವೇಶ ಮುಗಿದಾಗ ಇಂತಹ ಎಸೆಸೆಫ್ ನ ಅತ್ಯುನ್ನತ ನಾಯಕರಾದ ಸುಲ್ತಾನುಲ್ ಉಲಮಾರವರ ಬಗ್ಗೆ ಸದಭಿಪ್ರಾಯ ವ್ಯಾಪಕವಾಗತೊಡಗಿದೆ. ಇಂತಹ ಒಂದು ಬೃಹತ್ ಸಂಘಟನೆಯನ್ನು ಕಟ್ಟಿ ಬೆಳೆಸಬೇಕಾದರೆ ಆ ಮಹಾನ್ ವ್ಯಕ್ತಿಯ ಕೃತಶಕ್ತಿ ಎಂತಹದಿರಬಹುದೆಂಬ ಆಶ್ಚರ್ಯ ಮೂಡತೊಡಗಿದೆ.
ಇತ್ತೀಚೆಗೆ ಮಲೇಶಿಯಾ ಸರಕಾರವು ಪ್ರತಿಷ್ಠಿತ ಮಅಲ್ ಹಿಜ್ರಾ ಪುರಸ್ಕಾರವನ್ನು ಎಪಿ. ಉಸ್ತಾದರಿಗೆ ನೀಡಿತ್ತು. ಈ ಪುರಸ್ಕಾರ ಪಡೆದ ಭಾರತ ದೇಶದ ಪ್ರಥಮ ವ್ಯಕ್ತಿ ಎಪಿ ಉಸ್ತಾದ್ ಎಂಬುದಲ್ಲದೆ ಮಲೇಶ್ಯಾ ಸರಕಾರವು ವಿಶೇಷ ವಿಮಾನ ಕಳಿಸಿ ತನ್ನ ದೇಶಕ್ಕೆ ಬರಮಾಡಿಕೊಂಡು ಪುರಸ್ಕಾರ ನೀಡಿ ವಿಶೇಷ ವಿಮಾನದಲ್ಲಿ ಊರಿಗೆ ಕಳುಹಿಸಿಕೊಟ್ಟಿತ್ತು ಎಂಬುದು ವಿಶೇಷವಾಗಿತ್ತು. ಪುರಸ್ಕಾರ ಕೊಡುವಲ್ಲಿಗೆ ಪುರಸ್ಕೃತರೇ ಹೋಗಬೇಕಾದಂತಹ ಪರಿಸ್ಥಿತಿಯಲ್ಲಿ ಇದು ಬಹಳ ಅಪರೂಪದ ಕ್ರಮವಾಗಿತ್ತು.
ಈ ಗೌರವವನ್ನು ನಮ್ಮ ದೇಶದ ಓರ್ವ ಪ್ರಜೆಗೆ ದೊರೆತ ಗೌರವ ಎಂಬ ನೆಲೆಯಲ್ಲಾದರೂ ನಮ್ಮ ದೇಶೀಯ ಮಾಧ್ಯಮಗಳು ಇದರ ಸುದ್ಧಿ ಬಿತ್ತರಿಸಿಲ್ಲ ಎಂಬುದು ಬೇರೆ ವಿಷಯ. ಆದರೆ ಭಾರತ ದೇಶದ ಇತಿಹಾಸದಲ್ಲೇ ವಿದೇಶೀ ರಾಷ್ಟ್ರವೊಂದು ದೇಶದ ಪ್ರಜೆಯೊಬ್ಬರನ್ನು ತನ್ನ ದೇಶಕ್ಕೆ ವಿಶೇಷ ವಿಮಾನ ಕಳಿಸಿ ಕರೆತಂದು ಪುರಸ್ಕಾರ ನೀಡಿದ ಚರಿತ್ರೆ ಬೇರೆ ಇಲ್ಲ.
ಇದೀಗ ಎಪಿ ಉಸ್ತಾದರು ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಸ್ತುತ ವೆನಿಸುತ್ತಿದ್ದಾರೆ. ಅನಾರೋಗ್ಯ ಹಾಗೂ ಪ್ರಾಯಾಧಿಕ್ಯದ ಕ್ಷೀಣ ಲೆಕ್ಕಿಸದೆ ಅವರು ಜಗತ್ತಿನಾದ್ಯಂತ ಓಡಾಡುತ್ತಿದ್ದಾರೆ.
ಬೆಂಗಳೂರಲ್ಲಿ ನಡೆದ ಮೊನ್ನಿನ ಎಸೆಸೆಫ್ ಗೋಲ್ಡನ್ ಫಿಫ್ಟಿ ಸಮಾವೇಶದಲ್ಲೂ ಭಾಗವಹಿಸುವ ಮೂಲಕ ಅವರು ಕರ್ನಾಟಕದಲ್ಲಿ ಮತ್ತಷ್ಟು ಗೌರವ ಹೆಚ್ಚಿಸಿಕೊಂಡಿದ್ದಾರೆ. ಗೋಲ್ಡನ್ ಫಿಫ್ಟಿ ಸಮಾವೇಶವು ಕೇರಳದ ಸಮಾವೇಶವನ್ನು ಕೂಡಾ ಮೀರಿಸಿದೆ ಎಂದು ಸ್ವತ ಕೇರಳದವರಾದ ಪೇರೋಡುಸ್ತಾದರ ಪ್ರಸ್ತಾಪವು ಕರ್ನಾಟಕದ ಎಸೆಸೆಫ್ ನಡೆಸಿದ ಭಗೀರಥ ಪ್ರಯತ್ನಕ್ಕೆ ಸಂದ ಪ್ರಶಸ್ತಿಯಾಗಿದೆ.
ತನ್ನ ಹೊರ ರಾಜ್ಯವಾದ ಕರ್ನಾಟಕದಲ್ಲೂ ಇಂತಹ ಬಲಿಷ್ಠ ಸಂಘಟನೆಯನ್ನು ಬೆಳೆಸಲು ಸಾಧ್ಯವಾಯಿತೆನ್ನುವುದು ಎಪಿ ಉಸ್ತಾದರ ಮಹತ್ವವನ್ನು ಹೆಚ್ಚಿಸಿದೆ.
ಅಲ್ಲಾಹು ಅವರಿಗೆ ಆಯುರಾರೋಗ್ಯ ಹೆಚ್ಚಿಸಲಿ.
ಎಸೆಸೆಫ್ ಗೋಲ್ಡನ್ ಫಿಫ್ಟಿ ಸಮಾವೇಶವನ್ನು ಜಯಭೇರಿ ಭಾರಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಲ್ಲಾಹು ಬರಕತ್ ನೀಡಲಿ. ಆಮೀನ್.