janadhvani

Kannada Online News Paper

ಬಿಜೆಪಿಯವರಿಂದ ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಪ್ರಯತ್ನ-ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ಬಿಜೆಪಿಯವರು ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ನಮ್ಮ ಶಾಸಕರ ಮೇಲೆ ಭಾರಿ ಒತ್ತಡವಿದೆ. ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಾಕಷ್ಟು ಸ್ಥಾನಗಳನ್ನು ಹೊಂದಿರುವುದರಿಂದ ಶಾಸಕರನ್ನು ಸೆಳೆಯುವ ಯತ್ನ ಫಲಿಸದು. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಎಲ್ಲರಿಗೂ ದೂರವಾಣಿ ಕರೆ: ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಬಿಜೆಪಿ ಕಡೆಯಿಂದ ದೂರವಾಣಿ ಕರೆ ಬಂದಿದೆ. ಆದರೆ, ಶಾಸಕರು ಹೋಗುವುದಕ್ಕೆ ಮತ ಹಾಕಿರುವ ಜನ ಬಿಡಬೇಕಲ್ಲವೇ. ಯಾರಿಗೆ ಕರೆ ಮಾಡಿದರು ಅನ್ನುವ ಪಟ್ಟಿ ಕೊಡುತ್ತೇನೆ. ನಮಗೂ ರಾಜಕಾರಣ ಮಾಡೋದು ಗೊತ್ತಿದೆ ಎಂದು ಶಿವಕುಮಾರ್ ಹೇಳಿದರು.

‘ನಾವೇ ಸರ್ಕಾರ ರಚಿಸುತ್ತೇವೆ’: ಕಾಂಗ್ರೆಸ್‌ನ ಎಲ್ಲ ಶಾಸಕರೂ ಸಂಪರ್ಕದಲ್ಲಿದ್ದಾರೆ. ಯಾರೂ ನಾಪತ್ತೆಯಾಗಿಲ್ಲ. ನಾವೇ ಸರ್ಕಾರ ರಚಿಸುವ ಬಗ್ಗೆ ವಿಶ್ವಾಸವಿದೆ ಎಂದು ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಬಿಜೆಪಿಯಿಂದ ಕೀಳು ರಾಜಕೀಯ’: ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ಕೊಡುವ ಮಾತೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಇದರಿಂದ ಬಿಜೆಪಿಯವರು ಎಂತಹ ಮಟ್ಟಕ್ಕೆ ಇಳಿದಿದ್ದಾರೆ ಅನ್ನುವುದು ಗೊತ್ತಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಹೇಳಿದರು.

ಜನ ಅವರಿಗೆ (ಬಿಜೆಪಿಯವರಿಗೆ) ಆಶೀರ್ವಾದ ಮಾಡಿಲ್ಲ. ಹೀಗಾಗಿ ಸರ್ಕಾರ ರಚನೆಯಿಂದ ದೂರ ಇದ್ದರೇ ಸರಿ. ಅವರು ಸರ್ಕಾರ ರಚನೆ ಮಾಡಬೇಕು ಅಂತಾದರೆ ವಾಮಮಾರ್ಗ ಹಿಡಿಯಬೇಕು. ಇದು ಹೇಸಿಗೆ ತರಿಸುವ ಕೆಲಸ. ಇಂತಹ ಕಾರ್ಯಕ್ಕೆ ಕೈಹಾಕಬಾರದು ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com