ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 12ರಂದು ನಡೆದಿದ್ದ ಚುನಾವಣಾ ಫಲಿತಾಂಶವು ಹೊರಬಿದಿದ್ದು, ಈ ನಡುವೆ ಇಲ್ಲಿ ತನಕ ಯಾವುದೇ ಪಕ್ಷಕ್ಕೂ ಮ್ಯಾಜಿಕ್ ನಂಬರ್ 113 ಪಡೆದುಕೊಳ್ಳುವುದಕ್ಕೆ ಸಾಧ್ಯವಾಗದ ಸನ್ನಿವೇಶ ಕಂಡು ಬರುತ್ತಿದ್ದು, ಬಿಜೆಪಿ ಮಾತ್ರ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ಮೈತ್ರಿ ಸರ್ಕಾರಕ್ಕೆ ಮುಂದಾಗಿದೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿ.ಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಜೊತೆಗೆ ಹಳೆ ಸಂಬಂಧವನ್ನು ಮುಂದಿಟ್ಟುಕೊಂಡು ಮಾತುಕತೆ ನಡೆಸುವಂತೆ ಹೇಳಿದ್ದಾರೆ ಎನ್ನಲಾಗಿದ್ದು, ಈಗ ಕಾಂಗ್ರೆಸ್ ನ ಹಿರಿಯ ನಾಯಕರುಗಳ ಚಿತ್ತ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಅವರ ಮನೆ ಮೇಲೆ ನೆಟ್ವಿದೆ. ಇದಲ್ಲದೇ ವಿಧಾನಸಭಾ ಚುನಾವಣೆಯ ಸ್ಪಷ್ಟ ಚಿತ್ರಣ ಸಂಜೆಯೊಳಗೆ ಸಿಗುವ ಸಾಧ್ಯತೆ ಇದ್ದು ಎಲ್ಲರ ಚಿತ್ತ ಸಂಜೆ ಸಂಪೂರ್ಣವಾಗಿ ಹೊರ ಬೀಳುವ ಫಲಿತಾಂಶದತ್ತ ನೆಟ್ಟಿದೆ. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಕರೆ ಮಾಡಿದ್ದು ಮೈತ್ರಿ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ಇವೆಲ್ಲದರ ನಡುವೆ ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾದರೆ ಮುಖ್ಯಮಂತ್ರಿಯ ಆಗುವ ಕನಸು ಕಾಣುತ್ತಿರುವ ಬಿ.ಎಸ್ವೈಗೆ ಹಾಗೂ ಬಿಜೆಪಿ ಪಕ್ಷಕ್ಕೆ ಬಹು ದೊಡ್ಡಮಟ್ಟದ ಶಾಕ್ ಆಗಲಿದೆ.