janadhvani

Kannada Online News Paper

ಮಣಿಪುರದ ಜನತೆ ಶಾಂತಿ ಕಾಪಾಡಿಕೊಳ್ಳಬೇಕು- ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಕರೆ

ತಿಂಗಳುಗಟ್ಟಲೆ ವಿರೋಧ ಪಕ್ಷಗಳು ಆಗ್ರಹಿಸಿದ ನಂತರ, ಸ್ವಾತಂತ್ರ್ಯ ದಿನಾಚರಣೆಯಂದು ಸಂಘರ್ಷ ಪೀಡಿತ ಮಣಿಪುರದ ಕುರಿತು ಪ್ರಧಾನಿ ಪ್ರಸ್ತಾಪನೆ

ನವದೆಹಲಿ,ಆಗಸ್ಟ್.15: 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಮಣಿಪುರದ ಜನತೆ ಶಾಂತಿ ಕಾಪಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.

“ಕಳೆದ ಕೆಲವು ವಾರಗಳಿಂದ ಮಣಿಪುರ ಸರಣಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಈ ಹಿಂಸಾಚಾರದಲ್ಲಿ ಹಲವಾರು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ನಮ್ಮತಾಯಿ ಮತ್ತು ಸಹೋದರಿಯರಿಗೆ ಅಗೌರವ ತೋರಲಾಗಿದೆ. ಹೀಗಿದ್ದೂ, ಈ ಪ್ರಾಂತ್ಯದಲ್ಲಿ ನಿಧಾನವಾಗಿ ಶಾಂತಿ ಮರಳುತ್ತಿದೆ. ಭಾರತವು ಮಣಿಪುರದೊಂದಿಗೆ ನಿಲ್ಲಲಿದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣಿಪುರದಲ್ಲಿ ಶಾಂತಿಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಇಂದು ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಮೂಲಕ ಅವರ ಉದ್ದೇಶಗಳನ್ನು ಈಡೇರಿಸುವೆಡೆಗಿನ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಜೈ ಹಿಂದ್ ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ಈಗ ಜನಸಂಖ್ಯೆ ದೃಷ್ಟಿಯಲ್ಲೂ ಮುಂಚೂಣಿಯಲ್ಲಿದೆ. ಇಂದು 140 ಕೋಟಿ ಭಾರತೀಯರು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಕನಸುಗಳನ್ನು ನನಸಾಗಿಸಲು ಭಾರತದ ಜತೆ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಇದೆ ಎಂದು ಅವರು ಹೇಳಿದರು. ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ದೇಶವನ್ನು ಬದಲಾಯಿಸುತ್ತಿವೆ ಎಂದು ಪ್ರಧಾನಿ ನುಡಿದರು. 82 ನಿಮಿಷ ಭಾಷಣ ಮಾಡಿರುವ ಪ್ರಧಾನಿ ಮೋದಿ ಮಾಜಿ ಪ್ರದಾನಿ ಐ.ಕೆ.ಗುಜ್ರಾಲ್ ದಾಖಲೆಯನ್ನು ಮುರಿದಿದ್ದಾರೆ. 1997ರಲ್ಲಿ ಗುಜ್ರಾಲ್ 71 ನಿಮಿಷ ಭಾಷಣ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ತಮ್ಮಭಾಷಣದ ಕೊನೆಯಲ್ಲೂ ಮಣಿಪುರ ವಿಷಯವನ್ನು ಪ್ರಸ್ತಾಪಿಸಿ, ಸಮಗ್ರ ಅಭಿವೃದ್ಧಿಗಾಗಿ ಪರಸ್ಪರ ಗೌರವಿಸುವುದು ಹಾಗೂ ಪ್ರಾದೇಶಿಕ ಬಯಕೆಗಳನ್ನು ಈಡೇರಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ಮಾತನಾಡಬೇಕು ಎಂದು ತಿಂಗಳುಗಟ್ಟಲೆ ವಿರೋಧ ಪಕ್ಷಗಳು ಆಗ್ರಹಿಸಿದ ನಂತರ, ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ಪೀಡಿತ ಈಶಾನ್ಯ ರಾಜ್ಯವಾದ ಮಣಿಪುರದ ಕುರಿತು ಪ್ರಸ್ತಾಪಿಸಿದರು.

“ಕಳೆದ ಕೆಲವು ದಿನಗಳಲ್ಲಿ ಮರುಸ್ಥಾಪನೆಯಾಗಿರುವ ಶಾಂತಿಯನ್ನು ಮಣಿಪುರದ ಜನತೆ ನಿರ್ಮಿಸಬೇಕು. ಶಾಂತಿ ಮಾತುಕತೆಗಳ ಮೂಲಕ ಮಣಿಪುರದಲ್ಲಿ ಪರಿಹಾರ ತರಲಾಗುವುದು’ ಎಂದೂ ಅವರು ಹೇಳಿದ್ದಾರೆ.

ತಮ್ಮ ಸತತ 10ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 140 ಕೋಟಿ ಭಾರತೀಯರನ್ನು ಕುಟುಂಬದ ಸದಸ್ಯರು ಎಂದು ಸಂಬೋಧಿಸಿ, ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.

error: Content is protected !! Not allowed copy content from janadhvani.com