ವಾಷಿಂಗ್ಟನ್: ವಿಶ್ವದ ಪ್ರಭಾವಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಲಂಡನ್ ಮೂಲದ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಸಂಸ್ಥೆ ಪ್ರಕಟಿಸಿದೆ. ಅದು ನೀಡಿರುವ ರ್‍ಯಾಂಕಿಂಗ್ ಪ್ರಕಾರ ಪ್ರಸಕ್ತ ವರ್ಷ ಸಿಂಗಾಪುರ ದೇಶದ ಪಾಸ್‌ಪೋರ್ಟ್‌ಗೆ ವಿಶ್ವದ ನಂ. 1 ಪವರ್‌ಫುಲ್ ಪಾಸ್ ಪೋರ್ಟ್ ಎಂಬ ಖ್ಯಾತಿ ಸಂದಿದೆ.
ಕಳೆದ ಐದು ವರ್ಷಗಳಿಂದ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಜಪಾನ್ ಈ ಸಲ 3ನೇ ಸ್ಥಾನಕ್ಕೆ ಕುಸಿದಿದೆ. ಭಾರತ ಕಳೆದ ಸಲಕ್ಕಿಂತ ಈ ವರ್ಷ 5 ಸ್ಥಾನ ಮುಂದೆ ಜಿಗಿದಿದೆ. 199 ದೇಶಗಳ ಪೈಕಿ ಭಾರತಕ್ಕೆ ಈಗ 81ನೇ ರ್‍ಯಾಂಕ್ ಸಿಕ್ಕಿದೆ.
ಆರ್ಥಿಕ ಬಿಕ್ಕಟ್ಟಿನಿಂದ ಬಳಲಿರುವ ಪಾಕಿಸ್ತಾನಕ್ಕೆ ಕಳಪೆ ರ್‍ಯಾಂಕಿಂಗ್ ಬಂದಿದೆ. ವಿಶ್ವದ ನಾಲ್ಕನೇ ಕಳಪೆ ಪಾಸ್‌ಪೋರ್ಟ್ ಎಂದು ಘೋಷಿಸಲಾಗಿದೆ. ಪಟ್ಟಿಯಲ್ಲಿ ಇನ್ನುಳಿದ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ 97 ಮತ್ತು ನೇಪಾಳ 99ನೇ ರ್‍ಯಾಂಕ್ ಪಡೆದಿವೆ. ಪಾಕಿಸ್ತಾನದ ಕೆಳಗೆ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನ ದೇಶಗಳಿವೆ.
ಹೆನ್ಲಿ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅತ್ಯುನ್ನತ ಪಾಸ್‌ಪೋರ್ಟ್‌ಗಳ ಅಗ್ರ ಐದು ದೇಶಗಳಲ್ಲಿ ಜರ್ಮನಿ, ಇಟಲಿ, ಸ್ಪೇನ್ 2ನೇ ಸ್ಥಾನದಲ್ಲಿವೆ. ಆಸ್ಟ್ರೀಯಾ, ಫಿನ್‌ಲ್ಯಾಂಡ್, ಜಪಾನ್, ಫ್ರಾನ್ಸ್, ಲಕ್ಸಂಬರ್ಗ್, ದಕ್ಷಿಣ ಕೊರಿಯಾ, ಸ್ವೀಡನ್ ಮೂರನೇ ಸ್ಥಾನದಲ್ಲಿವೆ. ಡೆನ್ಮಾರ್ಕ್, ಐರ್ಲೆಂಡ್, ನೆದರ್‌ಲ್ಯಾಂಡ್, ಇಂಗ್ಲೆಂಡ್ ದೇಶಗಳು 4ನೇ ಸ್ಥಾನದಲ್ಲಿವೆ. ಬೆಲ್ಜಿಯಂ, ಚೆಕ್ ರಿಪಬ್ಲಿಕ್, ಮಾಲ್ಟಾ, ನ್ಯೂಜಿಲೆಂಡ್, ನಾರ್ವೆ, ಪೋರ್ಚುಗಲ್, ಸ್ವಿಟ್ಜರ್‌ಲೆಂಡ್ ಐದನೇ ಸ್ಥಾನದಲ್ಲಿವೆ. ಅಮೆರಿಕ ಈ ವರ್ಷ 8ನೇ ಸ್ಥಾನದಲ್ಲಿದೆ.
192 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ ಹೊಂದಿರುವ ಸಿಂಗಾಪುರದ ಪಾಸ್‌ಪೋರ್ಟ್ ‘ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ’ದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಜರ್ಮನಿ, ಇಟಲಿ ಮತ್ತು ಸ್ಪೇನ್ ಎರಡನೇ ಸ್ಥಾನಕ್ಕೆ ಏರಿವೆ. ಕಳೆದ ಐದು ವರ್ಷಗಳಲ್ಲಿ ಜಪಾನ್ ಮೊದಲ ಬಾರಿಗೆ ಅಗ್ರಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಸತತ ಆರು ವರ್ಷಗಳ ಕುಸಿತದ ಬಳಿಕ, ಇದೀಗ ಬ್ರೆಕ್ಸಿಟ್ ನಂತರ ಬ್ರಿಟನ್ (ಯುಕೆ) ಎರಡು ಸ್ಥಾನಗಳನ್ನು ಮೇಲಕ್ಕೆ ಹೋಗುವುದರೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿದೆ.
ಪಟ್ಟಿಯಲ್ಲಿ 81ನೇ ಸ್ಥಾನದಲ್ಲಿರುವ ಭಾರತವು ಸೆನೆಗಲ್, ಟೋಗೋದೊಂದಿಗೆ ಸ್ಥಾನವನ್ನು ಹಂಚಿಕೊಂಡಿದೆ. ಭಾರತದ ಪಾಸ್‌ಪೋರ್ಟ್ ಹೊಂದಿದವರು 57 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯಬಹುದಾಗಿದೆ.
ಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ