ಮಂಗಳೂರು : ಪುಂಜಾಲಕಟ್ಟೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2012ರಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಮುಕ್ತಗೊಳಿಸಿದೆ.
ಮಂಗಳೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಾದ ಮುಹಮ್ಮದ್ ಹುಸೈನಾರ್ ಅಲಿಯಾಸ್ ಹುಸೈನ್ ಹಾಗೂ ಇಬ್ರಾಹಿಂ ಅಲಿಯಾಸ್ ಟಿನ್ ಟಿನ್ ಮೋನು ಎಂಬವರನ್ನು ಪ್ರಕರಣದಿಂದ ದೋಷಮುಕ್ತ ಗೊಳಿಸಿದೆ.
ಪ್ರಕರಣದ ಇನ್ನಿಬ್ಬರು ಆರೋಪಿಗಳ ಪೈಕಿ ಒಬ್ಬರು ಮೃತರಾಗಿದ್ದರೆ, ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ. 2012 ಆಗಸ್ಟ್ 24ರ ಶುಕ್ರವಾರದಂದು, ಮನೆಯಲ್ಲಿ ಗಂಡಸರು ಮಸೀದಿಗೆ ಹೋದ ವೇಳೆಯಲ್ಲಿ, ಮನೆಯಲ್ಲಿದ್ದ ಮಹಿಳೆಯೊಂದಿಗೆ ಕುಡಿಯಲು ನೀರು ಬೇಕೆಂದು ಕೇಳಿದ್ದು, ನೀರು ತರಲು ಹೋದಾಗ ಹಿಂದಿನಿಂದ ಮಹಿಳೆಯ ಕೈಹಿಡಿದು ಚಾಕು ತೋರಿಸಿ, ಬೆದರಿಸಿ ಮನೆಯಲ್ಲಿದ್ದ ಎರಡುವರೆ ಲಕ್ಷದ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ ಎಂಬ ಪ್ರಕರಣ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರನ್ನು ಪ್ರಕರಣದಿಂದ ದೋಷಮುಕ್ತ ಗೊಳಿಸಿದೆ. ವಕೀಲರಾದ ಅಬೂಬಕ್ಕರ್ ಸಿದ್ದೀಕ್ ಎಂ.ಪಿ, ಇಸ್ಮಾಯಿಲ್ ಎಸ್., ದುಗಾ ನಾಯಕ್ ಹಾಗೂ ನಈಮ್ ಶೇಖ್ ಅವರು ಮೇಲಿನ ಆರೋಪಿಗಳ ಪರವಾಗಿ ವಾದಿಸಿದ್ದರು.