ಬೆಂಗಳೂರು,ಮೇ.24: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಾಲ್ಕು ಸದಸ್ಯರ ನಾಮನಿರ್ದೇಶವವನ್ನು ರದ್ದುಪಡಿಸಲಾದ ಸರ್ಕಾರದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ. ಇದರಂತೆ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಶಾಫಿ ಸಅದಿಯವರು ಮುಂದುವರಿಯಲಿದ್ದಾರೆ.
ರಾಜ್ಯ ಸರಕಾರವು, ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಸೇರಿದಂತೆ ನಾಲ್ವರು ಸದಸ್ಯರ ನಾಮನಿರ್ದೇಶನವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಇತರ ಸದಸ್ಯರಾದ ಮೀರ್ ಅಝರ್ ಹುಸೈನ್, ಜಿ.ಯಾಕೂಬ್ ಹಾಗೂ ಐಎಎಸ್ ಅಧಿಕಾರಿ ಝಹೆರಾ ನಸೀಮ್ ಅವರ ನಾಮ ನಿರ್ದೇಶನವನ್ನು ರದ್ದುಪಡಿಸಿ ಮಂಗಳವಾರ ಹಜ್ ಮತ್ತು ವಕ್ಫ್ ಇಲಾಖೆಯ ಅಧೀನ ಕಾರಯದರ್ಶಿ ಆದೇಶ ಹೊಡಿಸಿದ್ದರು.
ರಾಜ್ಯ ವಕ್ಫ್ ಬೋರ್ಡ್ ಸ್ವಾಯತ್ತ ಸಂಸ್ಥೆಯಾಗಿದ್ದು, ಸದಸ್ಯರ ಅಧಿಕಾರ ಅವಧಿಯು 5 ವರ್ಷಗಳಾಗಿರುತ್ತದೆ. ಈ ವಿಷಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಸದಸ್ಯರ ನಾಮ ನಿರ್ದೇಶನ ರದ್ದುಗೊಳಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆದು ಆದೇಶ ಹೊರಡಿಸಲಾಗಿದೆ.
ಸರಕಾರವು ವಕ್ಫ್ ಬೋರ್ಡ್ ಸದಸ್ಯರ ನಾಮ ನಿರ್ದೇಶನ ರದ್ದುಗೊಳಿಸಿ ಹಾತಡಿಸಿದ ಅಧಿಸೂಚನೆಯನ್ನು ಹಿಂಪಡೆದಿರುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್, ಸ್ಪೀಕರ್ ಯು.ಟಿ.ಖಾದರ್, ಶಾಸಕ ಎನ್.ಎ.ಹಾರೀಸ್ ಸೇರಿದಂತೆ ಎಲ್ಲ ಮುಸ್ಲಿಮ್ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿಯವರು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ಅಧಿವೇಶನದ ದಿನವೇ ಈ ಹಿಂದಿನ (ಬಿಜೆಪಿ) ಸರ್ಕಾರದಲ್ಲಿ ರಾಜ್ಯದ ಎಲ್ಲ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದ್ದ ಅಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳ ನೇಮಕಾತಿಗಳನ್ನು ರದ್ದುಗೊಳಿಸಲಾಗಿದ್ದು. ಜೊತೆಗೆ, ನಿಗಮ ಮಂಡಳಿಗಳಿಗೆ ನಿಡಲಾದ ಅನುದಾನ ಹಾಗೂ ಹಣ ಹಂಚಿಕೆಯನ್ನು ತತಕ್ಷಣದಿಂದಲೇ ತಡೆ ಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದರು.
ಹಿಂದಿನ ಸರ್ಕಾರದ ಅಕಾಡೆಮಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ, ಸದಸ್ಯರ, ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಿ,ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿ ರದ್ದು ಮಾಡಿದ ಸಿದ್ದರಾಮಯ್ಯ ಸರ್ಕಾರವು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ನಿಗಮ-ಮಂಡಳಿ ಅಧ್ಯಕ್ಷರು, ಸದಸ್ಯರು,ನಿರ್ದೇಶಕರನ್ನು ವಜಾಗೊಳಿಸಿದೆ. ತತಕ್ಷಣದಿಂದಲೇ ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಉಪಯೋಗಿಸುತ್ತಿದ್ದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ವಾಪಸ್ ಪಡೆಯಲಾಗುತ್ತಿದೆ.