ಈ ಊ ರ ಕುರಿತು ನೀವು ಬಲ್ಲಿರಾ…
✍️ ಎಂ ಹೆಚ್ ಹಸನ್ ಝುಹ್’ರಿ, ಮಂಗಳಪೇಟೆ
ಮಂಗಳಪೇಟೆ! ಈ ಹೆಸರು ಕೇಳದವರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಂತೆ ಹೊರ ಜಿಲ್ಲೆಯಲ್ಲಿಯೂ ಚಿರಪರಿಚಿತ ಗೊಂಡ ಹೆಸರಿದು. ಅದಕ್ಕೆ ಕಾರಣ ಇಲ್ಲಿಯ ಪುರಾತನ ಮಸೀದಿ. ಸರಿ ಸುಮಾರು ನೂರು ವರ್ಷಕ್ಕಿಂತಲೂ ಹೆಚ್ಚು ಇತಿಹಾಸವಿರುವ ಮಂಗಳಪೇಟೆ ಮುಹ್‌ಯಿದ್ದೀನ್ ಜುಮುಅ: ಮಸ್ಜಿದ್ ಬಡವರ ,ನಿರ್ಗತಿಕರ, ರೋಗಿಗಳ ಪಾಲಿಗೆ ಆಶಾ ಕಿರಣ ವಾಗಿದೆ.
ಹಿಂದಿನ ಕಾಲದಿಂದಲೂ ಜನರು ಮನಶಾಂತಿಗಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಮಂಗಳಪೇಟೆ ಮಸೀದಿಗೆ ಹರಕೆ ಮಾಡುತ್ತಿದ್ದರು. ಆ ಸಂಪ್ರದಾಯ ಇಂದೂ ಮುಂದುವರಿದಿದೆ. ಜಾತಿ,ಧರ್ಮ, ಪಥ,ಪಂಗಡಗಳಿಲ್ಲದೆ ಸರ್ವ ಧರ್ಮೀಯರು ಮಂಗಳಪೇಟೆ ಮಸೀದಿಗೆ ಹರಕೆ ಹೊತ್ತು ಬರುವುದನ್ನು ಕಾಣಬಹುದು. ಎಷ್ಟೇ ದೊಡ್ಡ ಸಮಸ್ಯೆ ಇರಲಿ,ಮಂಗಳಪೇಟೆ ಮಸೀದಿಗೆ ಬಂದು ಹರಕೆ ಮಾಡಿದರೆ ಅದು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.ಹೀಗೆ ಹಲವಾರು ಮಂದಿ ಸಮಸ್ಯೆ ಬಗೆ ಹರಿಸಿಕೊಂಡಿದ್ದಾರೆ.
ಮಕ್ಕಳಿಲ್ಲದವರು, ವಾಸಿಯಾಗದ ರೋಗಿಗಳು,ದುಡಿಮೆ ಇಲ್ಲದೆ ವ್ಯಥೆ ಪಡುವವರು, ಸಂಕಷ್ಟಕ್ಕೆ ಸಿಲುಕಿದವರು, ಮದುವೆ ಪ್ರಾಯಕ್ಕೆ ತಲುಪಿದ ಹೆಣ್ಣು ಮಕ್ಕಳ ಕಾರಣದಿಂದ ನೋವಾನುಭವಿಸುವವರು, ಸಾಲದಿಂದ ನೊಂದವರು,ವಿದೇಶದಲ್ಲಿ ಸಂಕಷ್ಟಕ್ಕೊಳಗಾದವರು, ಜೀವನದಲ್ಲಿ ಜಿಗುಪ್ಸೆ ಅನುಭವಿಸಿದವರು ಹೀಗೆ ಒಂದಲ್ಲ , ಎರಡಲ್ಲ… ನೂರಾರು ಜನ ಸಾಂತ್ವನಕ್ಕಾಗಿ,ಪರಿಹಾರಕ್ಕಾಗಿ ಮಂಗಳಪೇಟೆಯ ಮಸ್ಜಿದ್‌ಗೆ ಹರಕೆ ಹೊತ್ತು ತನ್ನ ಉದ್ದೇಶವನ್ನು ಈಡೇರಿಸಿಕೊಂಡಿದ್ದಾರೆ.
ವಿವಿಧ ಊರುಗಳಿಂದ ಜನರು ಮಂಗಳಪೇಟೆ ಮಸ್ಜಿದನ್ನು ಹುಡುಕಿ ಬಂದು ಹರಕೆ ನೀಡಿ ತಮ್ಮ ಉದ್ದೇಶ ಈಡೇರಿಸಿದ ತೃಪ್ತಿ ಮತ್ತು ಸಂತೋಷದಿಂದ ಹೋಗುವುದು ಕಾಣಬಹುದು. ಯಾವ ಉದ್ದೇಶ ವಿಟ್ಟು ಇಲ್ಲಿ ಹರಕೆ ನೀಡಿದರೂ ಆ ಉದ್ದೇಶ ಈಡೇರುವುದು ಮಂಗಳಪೇಟೆ ಮಸ್ಜಿದ್‌ಗಿರುವ ಪ್ರತ್ಯೇಕತೆ ಯಾಗಿದೆ.
ಇಲ್ಲಿ ವಾರಂಪ್ರತೀ ಅಂದರೆ ಪ್ರತೀ ಶುಕ್ರವಾರ ರಾತ್ರಿ ಸ್ವಲಾತ್ ಮಜ್ಲಿಸ್ ನಡೆಯುತ್ತಿದೆ.1992 ರ ಇಸವಿಯಲ್ಲಿ ಆರಂಭಗೊಂಡ ಸ್ವಲಾತ್ ಮಜ್ಲಿಸ್‌ಗೆ ಇದೀಗ 30 ವರ್ಷ ತುಂಬುತ್ತಿದೆ.ಇದೇ ಬರುವ ಮಾರ್ಚ್ 17 ಮತ್ತು 18 ದಿನಾಂಕಗಳಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಸಯ್ಯಿದ್ ಕುಟುಂಬದ ಕಣ್ಮಣಿ ಸಯ್ಯಿದ್ ಕಾಜೂರ್ ತಂಙಳ್ ಹಾಗೂ ಮರ್ಕಝ್ ಮುದರ್ರಿಸ್ ಸಯ್ಯಿದ್ ಜಝೀಲ್ ಶಾಮಿಲ್ ಇರ್ಪಾನಿ ತಂಙಳ್ ಭಾಗವಹಿಸಲಿದ್ದಾರೆ. ಪ್ರತೀ ವರ್ಷವೂ ಸ್ವಲಾತ್ ಮಜ್ಲಿಸ್‌ನ ವಾರ್ಷಿಕೋತ್ಸವವು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ವಾರ್ಷಿಕ ಸ್ವಲಾತ್ ಮಜ್ಲಿಸ್ ಮಂಗಳಪೇಟೆಯ ಜನರಿಗೆ ಮಾತ್ರವಲ್ಲ, ಆಸುಪಾಸಿನ ಊರಿನವರಿಗೂ ಒಂದು ಹಬ್ಬದ ಸಂಭ್ರಮವಾಗಿದೆ.ಉರೂಸ್‌ಗೆ ಜನರು ಹರಿದು ಬಂದಂತೆ ಮಂಗಳಪೇಟೆ ಸ್ವಲಾತ್ ವಾರ್ಷಿಕಕ್ಕೂ ಜನರು ಹರಿದು ಬರುವುದು ಕಾಣಬಹುದು. ನಮ್ಮೂರಿಗೆ ಇದೊಂದು ನಾಡ ಹಬ್ಬವಾಗಿ ಮಾರ್ಪಟ್ಟಿದೆ.
ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದ ಊರೇ ಮಂಗಳಪೇಟೆ. ಮಂಗಳೂರಿನಿಂದ 45 ನಂಬರ್,ಕಂಕನಾಡಿಯಿಂದ 15 ನಂಬರ್ ಬಸ್ ಏರಿದರೆ ಕೊನೆಯ ಸ್ಟಾಪ್ ನಲ್ಲಿ ಇಳಿದು ಸ್ವಲ್ಪ ಮುಂದಕ್ಕೆ ನಡೆದರೆ ಮಂಗಳಪೇಟೆ ಎಂಬ ಪುಟ್ಟ ಊರ ದರ್ಶನವಾಗುತ್ತದೆ. ಮಂಗಳಪೇಟೆಯ ಆಸುಪಾಸಿನಲ್ಲಿ ಐವತ್ತು ಅರವತ್ತು ಮನೆಗಳು ಮಾತ್ರ ಇವೆ. ಮಂಗಳಪೇಟೆ ಎಂಬ ಪುಟ್ಟ ಗ್ರಾಮ ಆಧ್ಯಾತ್ಮಿಕ ವೈಭವದಿಂದಲೇ ಖ್ಯಾತಿ ಪಡೆದಿದೆ.MRPL ಎಂಬ ಪೆಟ್ರೋಲಿಯಂ ಕಂಪನಿಯ ನಡುವೆ ರಮಣೀಯವಾಗಿ ಕಂಗೊಳಿಸುವ ಮಂಗಳಪೇಟೆಯ ಸೊಬಗನ್ನು , ಅನುಭೂತಿಯನ್ನು ಸವಿಯಲು ನೀವು ಬನ್ನಿರಿ. ನಿಮಗಿದೋ ಪ್ರೀತಿಯ ಆಹ್ವಾನ.