ಮಂಗಳೂರು: 15 ಸಜೀವ ಗುಂಡುಗಳೊಂದಿಗೆ ವಿಮಾನ ಏರಲು ಹೊರಟಿದ್ದ ಒಬ್ಬರನ್ನು ಇಲ್ಲಿನ ಬಜ್ಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಪೊಲೀಸರು ಶನಿವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದು, ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
ಬೆಳ್ತಂಗಡಿ ನಿವಾಸಿ ಪಿ.ಇಸ್ಮಾಯಿಲ್ (65) ಎಂಬುವವರು ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಮಂಗಳೂರಿನಿಂದ ನಾಗಪುರಕ್ಕೆ ಹೊರಟಿದ್ದರು. ವಿಮಾನ ನಿಲ್ದಾಣದ ದೇಶೀಯ ಪ್ರಯಾಣಿಕರ ತಪಾಸಣಾ ಪ್ರದೇಶದಲ್ಲಿ ಸಬ್ಇನ್ ಸ್ಪೆಕ್ಟರ್ ಸೌರಬ್ ಕುಮಾರ್ ನೇತೃತ್ವದ ತಂಡ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿತ್ತು.
ಶನಿವಾರ ಮಧ್ಯಾಹ್ನ 12.55ರ ಸುಮಾರಿಗೆ ಅವರನ್ನು ತಪಾಸಣೆ ನಡೆಸಲಾಯಿತು. ಆಗ ಅವರ ಚೀಲದಲ್ಲಿ 0.32 ಪಿಸ್ತೂಲ್‌ನಲ್ಲಿ ಬಳಸುವ 15 ಸಜೀವ ಗುಂಡುಗಳಿದ್ದವು ಎಂದು ಸಿಐಎಸ್ಎಫ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮೇಂದ್ರ ಸಿಂಗ್ ತಿಳಿಸಿದ್ದಾರೆ.
ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಗುಂಡುಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದಂತೆ ಇಸ್ಮಾಯಿಲ್ ಬಳಿ ಸರಿಯಾದ ದಾಖಲೆಗಳಿರಲಿಲ್ಲ. ಮುಂದಿನ ಕ್ರಮಕ್ಕಾಗಿ ಪೊಲೀಸರ ವಶಕ್ಕೆ ನೀಡಲಾಗಿತ್ತು.
‘ಇಸ್ಮಾಯಿಲ್ ವಿಚಾರಣೆ ನಡೆಸಿದಾಗ, ಪರವಾನಗಿ ಹೊಂದಿದ ಪಿಸ್ತೂಲ್ ಇದೆ. ಚುನಾವಣೆ ಕಾರಣದಿಂದ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಗುಂಡುಗಳು ಉಳಿದುಕೊಂಡಿದ್ದವು. ತಿಳಿಯದೇ ಬ್ಯಾಗ್‌ನೊಳಗೆ ಬಂದಿತ್ತು ಎಂದು ಹೇಳಿದರು. ಪರಿಶೀಲನೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.