ನವದೆಹಲಿ: ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಸಂಬಂಧಿಸಿದಂತೆ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೊಸ ಹಜ್ ನೀತಿಯನ್ನು ಪ್ರಕಟ ಮಾಡಿದೆ.
ಮೂಲಗಳ ಪ್ರಕಾರ,ಕೇಂದ್ರ ಸರ್ಕಾರವು ಈ ಬಾರಿ ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಪ್ರಯಾಣಿಕರಿಗೆ 50,000 ರೂ.ಗಳಷ್ಟು ತೀರ್ಥಯಾತ್ರೆಯ ವೆಚ್ಚವನ್ನು ಕಡಿಮೆ ಮಾಡಲಿದೆ. ಅದರ ಜೊತೆಗೆ ಕಳೆದ ವರ್ಷ 400 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಿತ್ತು. ಆದರೆ ಈ ಬಾರಿ ಹಜ್ ಯಾತ್ರೆ ಕೈಗೊಳ್ಳುವ ಪ್ರಯಾಣಿಕರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವೂ ಇಲ್ಲ ಎಂದು ಸಚಿವಾಲಯ ವ್ಯಕ್ತಪಡಿಸಿದೆ.
ಎಷ್ಟು ಜನರಿಗೆ ಅವಕಾಶ?
ಇನ್ನು ಈ ವರ್ಷ ಹಜ್ ಯಾತ್ರೆಗೆ ಸುಮಾರು 1.75 ಲಕ್ಷ ಕೋಟಾವನ್ನು ಭಾರತಕ್ಕೆ ನೀಡಲಾಗಿದ್ದು, ಹೊಸ ಹಜ್ ನಿಯಮದ ಪ್ರಕಾರ ಒಟ್ಟು ಕೋಟಾದ 80% ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ. ಉಳಿದವು ಖಾಸಗಿ ನಿರ್ವಾಹಕರಿಗೆ ಮೀಸಲಿರಿಸಲಾಗುತ್ತದೆ. ಹೀಗಾಗಿ ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್ ಕೋಟಾದಲ್ಲಿ 1,75,025 ಜನರು ಹಜ್ ಯಾತ್ರೆ ಕೈಗೊಳ್ಳಬಹುದು. ಆದರೆ ಕೇಂದ್ರ ಸರ್ಕಾರ ಇನ್ನೂ ಹಜ್ ಯಾತ್ರೆಗೆ ತೆರಳುವವರಿಗೆ ಅರ್ಜಿಗಳನ್ನು ತೆರೆದಿಲ್ಲ.
ಮೂಲಗಳ ಪ್ರಕಾರ, ‘ಈ ಬಾರಿ ಹಜ್ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಎಲ್ಲಾ ಹಜ್ ಯಾತ್ರಿಗಳು ಯಾವುದೇ ವೆಚ್ಚ ಮಾಡದೆ ಅರ್ಜಿ ಸಲ್ಲಿಸಬಹುದು. ಬ್ಯಾಗ್, ಸೂಟ್‌ಕೇಸ್, ಕೊಡೆ ಅಥವಾ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಆದ್ರೆ ಹಜ್ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ತಮ್ಮದೇ ಖರ್ಚಿನಲ್ಲೇ ಭರಿಸಬೇಕು.
ಹೊಸ ನೀತಿಯ ಅಡಿಯಲ್ಲಿ, ಹಜ್ ಯಾತ್ರೆಗೆ ಹಿರಿಯರು, ಮಹಿಳೆಯರು, ವಿಶೇಷ ಚೇತನರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು’ ಎಂದು ತಿಳಿದು ಬಂದಿದೆ.
ಇನ್ನು ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿರುವ 1.75 ಲಕ್ಷ ಮುಸ್ಲಿಂ ಯಾತ್ರಿಕರ ಪೈಕಿ ಶೇಕಡಾ 80 ರಷ್ಟು ಜನರು ಹಜ್ ಕಮಿಟಿ ಮೂಲಕ ಯಾತ್ರೆ ಕೈಗೊಳ್ಳಬಹುದು. ಉಳಿದ 20 ಶೇಕಡಾ ಜನರು ಖಾಸಗಿ ಪ್ರವಾಸಿ ಆಪರೇಟರ್‌ಗಳ ನೆರವಿನಿಂದ ಹಜ್ ಯಾತ್ರೆ ಕೈಗೊಳ್ಳಬಹುದು.
ಆದರೆ ಮುಖ್ಯವಾಗಿ ಯಾತ್ರೆಯನ್ನು ಕೈಗೊಳ್ಳುವ ಪ್ರವಾಸಿಗರು ಆರೋಗ್ಯ ತಪಾಸಣೆಯನ್ನು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಾಡಬೇಕು. ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಿದ ತಪಾಸಣೆಯನ್ನು ಪರಿಗಣಿಸಲಾಗಿದೆ. ಈ ಕುರಿತು ಅಲ್ಪ ಸಂಖ್ಯಾತ ಸಚಿವಾಲಯವು ಆರೋಗ್ಯ ಇಲಾಖೆಯನ್ನು ಸಂಪರ್ಕ ಮಾಡಿದೆ. ಇದರ ಜೊತೆಗೆ ಪ್ರತಿ ರಾಜ್ಯದಿಂದಲೂ ಒಬ್ಬರು ಹಜ್ ಕಮಿಟಿಯಿಂದ ಅಧಿಕಾರಿಯಾಗಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
25 ಕೇಂದ್ರಗಳಿಂದ ಹಜ್ ಯಾತ್ರೆ
ಹಜ್ ಯಾತ್ರೆ ಹೊರಡಲು ದೇಶದ ವಿವಿಧೆಡೆಯಲ್ಲಿ ಸುಮಾರು 25 ಸ್ಥಳಗಳನ್ನು ಗುರುತಿಸಲಾಗಿದೆ. ಒಂದು ಮಗುವಿರುವ ತಾಯಿಯಂದರಿಗೆ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಶ್ರೀನಗರ, ರಾಂಚಿ, ಗಯಾ, ಗುವಾಹಟಿ, ಇಂದೋರ್, ಭೋಪಾಲ್, ಮಂಗಳೂರು, ಗೋವಾ, ಔರಂಗಾಬಾದ್, ಬನಾರಸ್, ಜೈಪುರ, ನಾಗ್ಪುರ, ದೆಹಲಿ, ಮುಂಬಯಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ರಾಂಚಿ, ಚೆನ್ನೈ, ವಿಜಯವಾಡ ಮುಂತಾದ ಕಡೆಗಳಿಂದ ಯಾತ್ರೆ ಹೊರಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.