✍️ಸಾದಿಕ್ ಸುಳ್ಯ
(ಪ್ರ.ಕಾರ್ಯದರ್ಶಿ, ಕೆಸಿಎಫ್ ಒಮಾನ್)
ಪ್ರತಿಯೊಬ್ಬ ಮುಸ್ಲಿಮನ ಅತೀ ದೊಡ್ಡ ಕನಸಾಗಿದೆ ಪವಿತ್ರವಾದ ಹಜ್, ಉಮ್ರಾ ಯಾತ್ರೆ ಮತ್ತು ಹಬೀಬ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಝಿಯಾರತ್ ಮಾಡುವುದು. ಅದರಲ್ಲಂತೂ ನಮ್ಮ ತಂದೆ ತಾಯಿಯರ ಯವ್ವನದಲ್ಲಿ ಆರ್ಥಿಕವಾದ ಸಂಕಷ್ಟದಿಂದ ಉಮ್ರಾ ನಿರ್ವಹಿಸಲು ಸಾಧ್ಯವಾಗದವರು ಬಹಳಷ್ಟು ಜನರು ನಮ್ಮೆಡೆಯಲ್ಲಿದ್ದಾರೆ.
ಆದರೂ ತಮ್ಮ ಮನದ ಅತಿಯಾದ ಅಭಿಲಾಷೆಯನ್ನು ಈಡೇರಿಸಲು ತಮ್ಮ ಮಕ್ಕಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಕೆಲವೊಂದು ಮಕ್ಕಳಲ್ಲಿ ಬೇಕಾದಷ್ಟು ಆರ್ಥಿಕತೆ ಇದ್ದರೂ ತಂದೆ ತಾಯಿಯರ ಅಭಿಲಾಷೆಯನ್ನು ನಿರ್ಲಕ್ಷಿಸುವವರೂ ಇದ್ದಾರೆಂಬುದು ಸತ್ಯವಾಗಿದೆ. ಕೆಲವು ಮಕ್ಕಳು ತಂದೆ ತಾಯಿಯಂದಿರು ವಯಸ್ಸಾದ ಮೇಲೆ ಕಳುಹಿಸಬಹುದು ಅಂತ ಯೋಚಿಸುವವರೂ ಇದ್ದಾರೆ.
ಹಾಗೆ ಕಳುಹಿಸುವವರು ಯಾವುದಾದರು ಉಮ್ರಾ ಗ್ರೂಪನ್ನು ಸಂಪರ್ಕಿಸುತ್ತಾರೆ, ಕೆಲವೊಂದು ಉಮ್ರಾ ಗ್ರೂಪ್ ಗಳು ಕೇವಲ ವ್ಯಾಪಾರ ಉದ್ದೇಶದಿಂದ ಹಲವಾರು ಪೊಳ್ಳು ವಾಗ್ದಾನಗಳನ್ನು ನೀಡಿ ಉಮ್ರಾ ಗ್ರೂಪ್ ಗಳು ತಮ್ಮ ಗ್ರೂಪನ್ನು ನಡೆಸುವುದು ಸಾಮಾನ್ಯವಾಗಿದೆ. ಹಾಗೆ ಗ್ರೂಪ್ಗಳಲ್ಲಿ ಹೋದ ತಂದೆ ತಾಯಿಯಂದಿರು ಬರುವ ಕಷ್ಟ ಸಂಕಷ್ಟ ಅಷ್ಟಿಷ್ಟಲ್ಲ.
ಮೊನ್ನೆ ದಿನಾಂಕ 26/01/2023 ರಂದು ಉಮ್ರಾ ಮುಗಿಸಿ ಹಿಂತಿರುಗುವ ವೇಳೆ ಎರಡು ತಾಯಿಯಂದಿರಿಗೆ ಅನಾರೋಗ್ಯದ ಕಾರಣದಿಂದ ಮುಂಬೈ ಹೋಗುವ ವಿಮಾನ ಮಸ್ಕತ್ ವಿಮಾನ ನಿಲ್ದಾನದಲ್ಲಿ ತುರ್ತಾಗಿ ಲ್ಯಾಂಡಿಂಗ್ ಮಾಡಬೇಕಾಗಿ ಬಂತು. ಲ್ಯಾಂಡಿಂಗ್ ಆದ ನಂತರ ತಕ್ಷಣ ವಿಮಾನ ನಿಲ್ದಾನದ ಆಸ್ಪತ್ರೆಗೆ ಸಾಗಿಸಿದರೂ ಕೆಲವೇ ಕ್ಷಣಗಳಲ್ಲಿ ಒಬ್ಬರು ಇಹಲೋಕ ತ್ಯಜಿಸಿದರು, ಆ ಮರಣದ ಸಮಯದಲ್ಲಿ ಆ ಮಹಾ ತಾಯಿ ಎಷ್ಟು ನೋವು ಅನುಭವಿಸಿರಬಹುದೇನೋ ಅಲ್ಲಾಹನೇ ಬಲ್ಲ. ತನ್ನ ನೋವನ್ನು ಹೇಳಲು ತಮ್ಮವರು ಅಂತ ಯಾರೂ ಇರಲಿಲ್ಲ. ಕೆ ಸಿ ಎಫ್ ಒಮಾನಿನ ರಾಷ್ಟ್ರೀಯ ಸಮಿತಿಯ ನಾಯಕರಾದ ಅಬ್ಬಾಸ್ ಮರಕ್ಕಡರವರು ಸ್ವಂತ ತಾಯಿ ಎಂದು ಪರಿಗಣಿಸಿ ನಿದ್ದೆಗೆಟ್ಟು ಅವರ ಮಯ್ಯಿತನ್ನು ಊರಿಗೆ ಕಳುಹಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ ಮಯ್ಯತನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.
ಅದೇ ವಿಮಾನದಲ್ಲಿದ್ದ ಮತ್ತೊಂದು ತಾಯಿ ಮತ್ತು ಅವರ ಜೊತೆಗೆ ಇರುವ ಒಬ್ಬರು ವಯಸ್ಸಾದವರು ಅವರು ಬಂದ ಕಷ್ಟ ಅಷ್ಟಿಷ್ಟಲ್ಲ. ಅವರನ್ನು ವಿಮಾನ ನಿಲ್ದಾನದ ಆಸ್ಪತ್ರೆಯಿಂದ ಮಸ್ಕತ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಅವರನ್ನು ಭೇಟಿಯಾಗಲು ಕೆ ಸಿ ಎಫ್ ತಂಡವು ಆಸ್ಪತ್ರೆಗೆ ತೆರಳಿದರು. ಅಲ್ಲಿ ಅವರ ಪರಿಸ್ಥಿತಿಯನ್ನು ನೋಡಿದ ನಮ್ಮ ನಾಯಕರ ಕಣ್ಣು ಒದ್ದೆಯಾಯಿತು, ನಾವು ಅವರೊಂದಿಗೆ ಮಾತನಾಡುವಾಗ ಅವರಿಗೆ ಆದ ಸಂತೋಷವನ್ನು ಹೇಳಿ ತೀರಲಾರದು. ಅವರನ್ನು ಭೇಟಿ ಮಾಡಿ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಕೊಡಲಾಯಿತು. ಅಲ್ಲಿದ್ದ ನಮಗೆಲ್ಲರಿಗೂ ಒಂದು ದೊಡ್ಡ ಪಾಠವೂ ಸಿಕ್ಕಿತು.
ವಯಸ್ಸಾದ ತಂದೆ ತಾಯಿಯಂದಿರನ್ನು ಉಮ್ರಾಕ್ಕೆ ಕಳುಹಿಸುವಾಗ ಖಡ್ಡಾಯವಾಗಿ ಯಾರಾದರೂ ಒಬ್ಬರು ಜೊತೆಯಲ್ಲಿರಬೇಕು ಕೇವಲ ಅಮೀರರ ಜವಾಬ್ದಾರಿಯೊಂದಿಗೆ ಕಳುಹಿಸಿದರೆ ಕಷ್ಟ ಅನುಭವಿಸುವುದು ಮಾತ್ರ ನಮ್ಮ ತಂದೆ ತಾಯಿಯಂದಿರೇ ಆಗಿರುತ್ತಾರೆ. ಎಷ್ಟೇ ಕಷ್ಟ ಆದರೂ ತಂದೆ ತಾಯಂದಿರಿಗೆ ವಯಸ್ಸಾಗುವ ಮೊದಲು ಅವರ ಆಸೆಯನ್ನು ಈಡೇರಿಸಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಮಕ್ಕಳೇ ಅವರನ್ನು ಕರೆದು ಕೊಂಡು ಹೋಗಿ ಉಮ್ರಾ ಮತ್ತು ಝಿಯಾರತ್ ಮಾಡಿ ಸಂತೋಷದೊಂದಿಗೆ ಹಿಂದಿರುಗಿರಿ. ನಮ್ಮಿಂದ ಅಗಲಿದ ಆ ತಾಯಿಯ ಖಬರ್ ಜೀವನ ಅಲ್ಲಾಹು ಸಂತೋಷಗೊಳಿಸಲಿ ಮತ್ತು ಆಸ್ಪತ್ರೆಯಲ್ಲಿರುವ ತಾಯಿ ಆದಷ್ಟು ಬೇಗ ಗುಣಮುಖರಾಗಿ ಊರಿಗೆ ತೆರಳಲು ಅಲ್ಲಾಹು ತೌಫೀಕ್ ನೀಡಲಿ.







