janadhvani

Kannada Online News Paper

74ನೇ ಗಣರಾಜ್ಯೋತ್ಸವ ಸಂಭ್ರಮ-ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ

ಕರ್ತವ್ಯಪಥದಲ್ಲಿ ಮೂರು ಪಡೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸುತ್ತಿವೆ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಯದೀಪ್‌ ಧನಕರ್‌ ಸಾಥ್‌ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್‌ ಆರಂಭವಾಯಿತು. ರಾಜಪಥ್‌ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದ್ದು, ಪರೇಡ್‌ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣವಾಯಿತು.

ಇದೇ ಮೊದಲ ಬಾರಿಗೆ ಈಜಿಪ್ಟ್‌ ಸೇನಾಪಡೆಗಳು ಕೂಡ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗಿಯಾಗಿದ್ದು, ಈಜಿಪ್ಟ್‌ ಸೇನಾ ಪಡೆಗಳ 144 ಸೈನಿಕರು ಪ್ರಜಾರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.

ಕರ್ತವ್ಯಪಥದಲ್ಲಿ ಮೂರು ಪಡೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸುತ್ತಿವೆ. ವಾಯುಪಡೆ ತಂಡದಿಂದ ಆಕಾಶ್ ಮಿಸೈಲ್, ಏರ್ ಡಿಫೆನ್ಸ್ ತಂಡ, ಬ್ರಿಡ್ಜ್ ಎಂಜಿನಿಯರಿಂಗ್ ತಂಡ, ಬ್ರಹ್ಮೋಸ್-861 ಮಿಸೈಲ್ ತಂಡ, ಕೆ9 ವಜ್ರಾ ಟ್ಯಾಂಕ್ ಗ್ರೂಪ್ ತಂಡ, ಕ್ವಿಕ್ ರೆಸ್ಪಾನ್ಸ್ ಲಡಾಖ್ ಸ್ಕೌಟ್ ತಂಡ, ಬಿಎಂಪಿ ಸಾರಥ್ ಇನ್ಫೆಂಟ್ರಿ ತಂಡ, ನಾಗಾ ಮಿಸೈಲ್ ಸಿಸ್ಟಂ ತಂಡದಿಂದ ಪರೇಡ್ ನಡೆಯಿತು.

ಕರ್ತವ್ಯಪಥದಲ್ಲಿ ನಡೆದ ಪಥಸಂಚಲನದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಭಾರತೀಯ ಸೇನೆಯಿಂದ ಪ್ರದರ್ಶಿಸಲಾಯಿತು. ಈ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಮರ್ ಜವಾನ್ ಜ್ಯೋತಿಗೆ ಆಗಮಿಸಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಗೌರವ ಸಲ್ಲಿಸಿದರು. ಹುತಾತ್ಮ ಯೋಧರ ನೆನಪಿಗಾಗಿ ಕಟ್ಟಿಸಿರುವ ಅಮರ್ ಜವಾಬ್ ಜ್ಯೋತಿಯಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, 3 ಸೇನಾ ಮುಖ್ಯಸ್ಥರು ಗೌರವ ನಮನ ಸಲ್ಲಿಸಿದರು.

error: Content is protected !! Not allowed copy content from janadhvani.com