ನವದೆಹಲಿ, ಜ.23: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲು ತ್ರಿಸದಸ್ಯ ಪೀಠವನ್ನು ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಇಂದು ಹೇಳಿದೆ.
ಹಿಜಾಬ್ ನಿಷೇಧದಿಂದಾಗಿ ಅನೇಕ ಹುಡುಗಿಯರು ಶಿಕ್ಷಣ ಸಂಸ್ಥೆಗಳನ್ನು ತೊರೆದಿದ್ದಾರೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ನ್ಯಾಯಾಲಯಕ್ಕೆ ತಿಳಿಸಿದರು. ಫೆಬ್ರವರಿ 6, 2023 ರಿಂದ ಹೆಣ್ಣು ಮಕ್ಕಳು ಪ್ರಾಯೋಗಿಕ ಪರೀಕ್ಷೆಗಳನ್ನು ಹೊಂದಿದ್ದಾರೆ. ಹೀಗಾಗಿ ಹಿಜಾಬ್ ವಿಷಯವನ್ನು ಮಧ್ಯಂತರ ನಿರ್ದೇಶನಗಳಿಗಾಗಿ ಪಟ್ಟಿ ಮಾಡಬೇಕಾಗಿದೆ.
ಪ್ರಾಯೋಗಿಕ ಪರೀಕ್ಷೆಗಳು ಹಿಜಾಬ್ ನಿಷೇಧವಿರುವ ಸರ್ಕಾರಿ ಶಾಲೆಗಳಲ್ಲಿ ನಡೆಯಲಿವೆ. ಇದು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಅಡ್ಡಿಯಾಗಲಿದೆ. ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಹಿಜಾಬ್ ಕುರಿತು ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಕೆಲವು ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಆಗ್ರಹಿಸಿದರು.
ಮೀನಾಕ್ಷಿ ಅರೋರಾ ಅವರ ವಾದವನ್ನು ಆಲಿಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಹಿಜಾಬ್ ವಿಚಾರಣೆ ನಡೆಸಲು ತ್ರಿಸದಸ್ಯ ಪೀಠವನ್ನು ಸ್ಥಾಪಿಸಲು ಪರಿಗಣಿಸುವುದಾಗಿ ಹೇಳಿದೆ.
ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಕಳೆದ ವರ್ಷ ಅಕ್ಟೋಬರ್ 13 ರಂದು ಹಿಜಾಬ್ ವಿವಾದದಲ್ಲಿ ವಿರುದ್ಧ ತೀರ್ಪುಗಳನ್ನು ನೀಡಿತ್ತು.ಸಮುದಾಯಕ್ಕೆ ತನ್ನ ಧಾರ್ಮಿಕ ಸಂಕೇತಗಳನ್ನು ಶಾಲೆಗಳಲ್ಲಿ ಧರಿಸಲು ಅನುಮತಿ ನೀಡುವುದು ಜಾತ್ಯತೀತತೆಗೆ ವಿರೋಧವಾಗಿದೆ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದರು, ಆದರೆ ನ್ಯಾಯಮೂರ್ತಿ ಧುಲಿಯಾ ಅವರು ಮುಸ್ಲಿಂ ಹಿಜಾಬ್ ಧರಿಸುವುದು ಕೇವಲ ಆಯ್ಕೆಯ ವಿಷಯವಾಗಿರಬೇಕು ಎಂದು ಹೇಳಿದ್ದರು.
ವಿಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಹಿಜಾಬ್ ವಿಷಯದ ಇತ್ಯರ್ಥಕ್ಕೆ ತ್ರಿಸದಸ್ಯ ಪೀಠ ಸ್ಥಾಪನೆಗೆ ಸುಪ್ರೀಂ ಮುಂದಾಗಿದೆ.