janadhvani

Kannada Online News Paper

ಯುಎಇ ಯಲ್ಲಿ ಪ್ಲಾಸ್ಟಿಕ್ ಅಕ್ಕಿ: ನಿಜಾಂಶವೇನು ?

ಅಬುಧಾಬಿ: ಎಮಿರೇಟ್‌ಸ್ ನ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಲಭ್ಯವಿದೆ ಎನ್ನುವ ಪ್ರಚಾರವು ಆಧಾರ ರಹಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಎಲ್ಲಾ ವಿಧ ಅಕ್ಕಿಗಳು ಸುರಕ್ಷಿತ ಮತ್ತು ಉಪಯುಕ್ತವಾಗಿವೆ.ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಲಾಗುವ ಪ್ರಚಾರಗಳು ದಾರಿತಪ್ಪಿಸುತ್ತಿದೆ ಎಂದು ಆಹಾರ ಮೇಲ್ವಿಚಾರಣಾ ಪ್ರಾಧಿಕಾರ ಹೇಳಿದೆ.

ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿದೆ ಎನ್ನುವ ಸುದ್ದಿಯು ಜನರೆಡೆಯಲ್ಲಿ ತಪ್ಪು ಧಾರಣೆ ಉಂಟು ಮಾಡುತ್ತಿದೆ. ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಶಾಶ್ವತ ಪರಿಶೀಲನೆಯನ್ನು ಪ್ರಾಧಿಕಾರವು ನಡೆಸುತ್ತಿದೆ.ಅತಿ ನೂತನ ತಂತ್ರಜ್ಞಾನದೊಂದಿಗೆ ನಡೆಸಲಾಗುವ ಈ ತಪಾಸಣೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಂಡುಬಂದಿಲ್ಲ.

ದೇಶಕ್ಕೆ ತಲುಪುವ ಎಲ್ಲಾ ಆಹಾರ ಉತ್ಪನ್ನಗಳನ್ನು ವೈಜ್ಞಾನಿಕ ಪರಿಶೀಲನೆಗಳ ನಂತರವಷ್ಟೇ ಕಂಪನಿಗಳು ಅವುಗಳನ್ನು ಮಾರುಕಟ್ಟೆಗೆ ತಲುಪಿಸುತ್ತದೆ. ತಪಾಸಣೆಯಲ್ಲಿ ಕುಂದುಕೊರತೆಗಳು ಕಂಡುಬಂದಲ್ಲಿ ,ಉತ್ಪನ್ನಗಳನ್ನು ಶೀಘ್ರದಲ್ಲೇ ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ. ಖರೀದಿಸುವಾಗ ಸಂಶಯ ಉಂಟಾಗುವ ವೇಳೆ ಸಾರ್ವಜನಿಕರಿಗೆ ದೂರು ನೀಡಲು ಟೋಲ್ ಫ್ರೀ ಸಂಖ್ಯೆಯೂ ಲಭ್ಯವಿದೆ.

ಮಾರಾಟವಾಗುವ ಯಾವುದೇ ಉತ್ಪನ್ನದಲ್ಲಿ ನ್ಯೂನ್ಯತೆ ಇದ್ದರೆ, ಮೊದಲು ಆ ಬಗ್ಗೆ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ತಿಳಿಸಲಾಗುತ್ತದೆ.ನಂತರ, ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.

ಸುಳ್ಳು ವರದಿಗಳನ್ನು ಹರಡಬೇಡಿ

ಸಾಮಾಜಿಕ ಮಾಧ್ಯಮಗಳು ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿರಿ ಮತ್ತು ಅವುಗಳನ್ನು ಹರಡಬೇಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೂಲರಹಿತ ಸುದ್ದಿ ಮತ್ತು ವೀಡಿಯೊ ಕ್ಲಿಪ್ ಗಳನ್ನು ಅನುಸರಿಸುವ ಮೂಲಕ ಸಮುದಾಯದೆಡೆಯಲ್ಲಿ ಗೊಂದಲ ಉಂಟುಮಾಡಬೇಡಿ. ಸುದ್ದಿಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ.

ಉತ್ಪನ್ನಗಳು ಮತ್ತು ಘಟಕಗಳ ಬಗ್ಗೆ ದೂರುಗಳನ್ನು ನೀಡಲು  ಟೋಲ್ ಫ್ರೀ ಸಂಖ್ಯೆ: 800555 ಯನ್ನು ಬಳಸಬಹುದಾಗಿದೆ.

error: Content is protected !! Not allowed copy content from janadhvani.com