janadhvani

Kannada Online News Paper

ಕರಾವಳಿ ಕ್ರೂರಿಗಳ ನಾಡಾಗುವುದು ಬೇಡ- ನಾಳೆ ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ

ಕೊಂದವನಿಗೆ ಗೊತ್ತಿಲ್ಲ ನಾನು ಯಾರನ್ನು ಕೊಂದೆ ಎಂದು! ಕೊಲ್ಲಲ್ಪಟ್ಟವನಿಗೆ ಅರಿವಿಲ್ಲ ನಾನೇಕೆ ಕೊಲ್ಲಲ್ಪಟ್ಟೆ ಎಂದು!! ತಬ್ಬಲಿಯಾದ ಮಕ್ಕಳಿಗೆ, ವಿಧವೆಯಾದ ಪತ್ನಿಗೆ, ಜನ್ಮ ನೀಡಿದ ತಾಯಿಗೆ ತಿಳಿಯುತ್ತಿಲ್ಲ ನಾವು ಯಾಕೆ ಅನಾಥರಾದೆವೆಂದು!!!

ಮಂಗಳೂರು, ಡಿ.26: ಇತ್ತೀಚಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಏರುತ್ತಿರುವ ಸಮಾಜಘಾತುಕ ಘಟನೆಗಳನ್ನು ಖಂಡಿಸಿ, ಸುನ್ನೀ ಸಂಘಟನೆಗಳು ನಾಳೆ ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ನಡೆಸಲಿದೆ.

ಕರಾವಳಿ ಕ್ರೂರಿಗಳ, ರೌಡಿಗಳ, ಕೊಲೆಗಟುಕರ ಊರಾಗುವುದು ಬೇಡ ಸಾಮ್ಯ-ಸಮರಸದ, ನಿರ್ಭೀತಿಯ, ವೈಭವದ ಕರಾವಳಿಯನ್ನು ಮರಳಿ ಕೊಡಿ ಎಂಬ ಧ್ಯೇಯವನ್ನು ಮುಂದಿಟ್ಟು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ಸಮಿತಿ, ದ. ಕ. ಸುನ್ನೀ ಯುವಜನ ಸಂಘ(SYS), ದ.ಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸಂಜೆ 3 ಗಂಟೆಗೆ ಬೃಹತ್ ಹಕ್ಕೊತ್ತಾಯ ಸಭೆಯನ್ನು ನಡೆಸಲಿದೆ.

ಅಮಾಯಕರನ್ನು ಕೊಂದು, ಮುಗ್ಧ ಮಕ್ಕಳನ್ನು ತಬ್ಬಲಿ ಮಾಡಿ ಧರ್ಮ ಕಟ್ಟಿ ಎಂದು ಕಲಿಸಿಕೊಟ್ಟವರಾರು?

✍️ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ
(ಕೋಶಾಧಿಕಾರಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

ವಿದ್ಯೆ ಅನಾಗರಿಕನನ್ನು ನಾಗರಿಕರನನ್ನಾಗಿ ಮಾಡುತ್ತೆ ಎಂದು ಕೇಳಿದ್ದೇವೆ, ವಿದ್ಯೆಯಿಂದ ಮನುಷ್ಯ ಪೂರ್ಣ ಅರ್ಥದಲ್ಲಿ ಮನುಷ್ಯನಾಗುತ್ತಾನೆ ಎಂದೂ ಹೇಳಲಾಗುತ್ತದೆ. ಆದರೆ ಪ್ರತಿ ವರ್ಷವೂ ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬುದ್ದಿವಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಕಗ್ಗೊಲೆಗಳು, ಧರ್ಮಾಂಧತೆ ಮತ್ತೇರಿದವರ ರೌದ್ರ ತಾಂಡವ, ರೌಡಿಗಳ ಅಟ್ಟಹಾಸ ಮೇಲಿನ ಎಲ್ಲಾ ಹೇಳಿಕೆಗಳನ್ನು ಸುಳ್ಳಾಗಿಸುತ್ತಿದೆ.ಇಂದು ನಮ್ಮ ಜನಪ್ರತಿನಿಧಿಗಳಿಗೆ ಅಧಿಕಾರ ಪಡೆಯಲು ಅಭಿವೃದ್ಧಿ ಮಾಡಬೇಕೆಂದೇನೂ ಇಲ್ಲ.

ಮೂರ್ನಾಲ್ಕು ವರ್ಷ ಸಿಕ್ಕಿದ್ದೆಲ್ಲಾ ದೋಚಿ, ಐಷಾರಾಮಿಯಾಗಿ ಓಡಾಡಿ ದಿನದೂಡಿದರೆ ಸಾಕು. ಕೊನೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ತಾನು ಸಾಕಿದ ರೌಡಿಗಳಿಗೆ ಧರ್ಮಾಂಧತೆಯ ವಿಷಬೀಜ ಬಿತ್ತಿ ಅಮಾಯಕರ ಮೇಲೆ ಛೂ ಬಿಟ್ಟು ನೆಮ್ಮದಿಯಿಂದ ದುಡಿದು ಬದುಕುವ ಮುಗ್ಧ ಮನುಷ್ಯರನ್ನು ಬರ್ಬರವಾಗಿ ಕೊಚ್ಚಿ ಕೊಂದು ಹಾಕಿ ಬಿಟ್ಟರೆ ಸಾಕು ತನ್ನ ಹಗರಣಗಳೆಲ್ಲವೂ ಮುಚ್ಚಲ್ಪಟ್ಟು ಮುಂದಿನ ಐದು ವರ್ಷವೂ ನನ್ನ ಸೀಟು ಸೇಫ್!!

ಕೊಂದವನಿಗೆ ಗೊತ್ತಿಲ್ಲ ನಾನು ಯಾರನ್ನು ಕೊಂದೆ ಎಂದು! ಕೊಲ್ಲಲ್ಪಟ್ಟವನಿಗೆ ಅರಿವಿಲ್ಲ ನಾನೇಕೆ ಕೊಲ್ಲಲ್ಪಟ್ಟೆ ಎಂದು!! ತಬ್ಬಲಿಯಾದ ಮಕ್ಕಳಿಗೆ, ವಿಧವೆಯಾದ ಪತ್ನಿಗೆ, ಜನ್ಮ ನೀಡಿದ ತಾಯಿಗೆ ತಿಳಿಯುತ್ತಿಲ್ಲ ನಾವು ಯಾಕೆ ಅನಾಥರಾದೆವೆಂದು!!!

ಇದು ಕಂಡು ರೊಚ್ಚಿಗೆದ್ದ ಜನತೆ ಹತ್ತಿಪ್ಪತ್ತು ದಿನ ಪ್ರತಿಭಟನೆ, ಹೇಳಿಕೆ, ಹೋರಾಟ ಮಾಡಿದರೂ ಕೂಡ ಕೊನೆಗೆ ಇದೆಲ್ಲವೂ ರಾಜಕೀಯ ಎಂಬ ನಾಲ್ಕಕ್ಷರ ಹೇಳಿ ಅವರೂ ಸುಮ್ಮನಿದ್ದು ಬಿಡುತ್ತಾರೆ.ಮೊದಲೆಲ್ಲಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಏನೋ ಒಂದು ಕುತೂಹಲ, ಖುಷಿ, ರೋಚಕತೆ ಇತ್ತು. ವಿವಿಧ ಪಕ್ಷಗಳ ಮಧ್ಯೆ ಆರೋಗ್ಯಕರ ಪೈಪೋಟಿ, ಅವರು ಮಾಡಿದ ಸಾಧನೆಗಳನ್ನು ಹೇಳಿ ಜನರನ್ನು ಸೆಳೆಯುವ ವಿವಿಧ ತಂತ್ರಗಳು. ಒಂದರ್ಥದಲ್ಲಿ ಜನರು ಚುನಾವಣೆಗಾಗಿ ಕಾಯುತ್ತಿದ್ದರು.

ಈಗೀಗ ಚುನಾವಣೆ ಬಂತು ಎಂದು ಕೇಳುವಾಗಲೇ ಜನರಿಗೆ ಅದೇನೋ ಒಂದು ಭೀತಿ! ಯಾರ ತಲೆ ಒಡೆದು ಹಾಕುತ್ತಾರೋ? ಎಲ್ಲಿ ಗಲಭೆ ಸೃಷ್ಟಿಸುತ್ತಾರೋ? ಯಾವ ಸಮಸ್ಯೆಯನ್ನು ಸೃಷ್ಟಿಸುತ್ತಾರೋ ಎಂಬ‌ ಭಯ!ಆದರೆ ಇದ್ಯಾವುದೂ ಅರ್ಥವೇ ಆಗುತ್ತಿಲ್ಲ ನಮ್ಮ ಬುದ್ಧಿವಂತರ ಜಿಲ್ಲೆಯ ಜನತೆಗೆ. ಇಂದು ಅವನ ತಲೆ ಹೋದರೆ ನಾಳೆ ನನ್ನ ತಲೆಯೂ ಹೋಗಬಹುದು, ಛೂ ಬಿಟ್ಟವರು ನಾಳೆ ದಿನ ನನ್ನ ಶವವನ್ನಿಟ್ಟು ರಾಜಕೀಯ ಮಾಡಬಹುದು, ನನ್ನ ನೆತ್ತರಲ್ಲೂ ಓಟು ಹುಡುಕಬಹುದು ಎಂಬ ಯೋಚನೆ ಕೂಡ ಅವರಿಗೆ ಇಲ್ಲವಾಗಿದೆ.

ಧರ್ಮ ಜಾತಿಗಳು ಇಂದು ನಿನ್ನೆ ಬಂದದ್ದಲ್ಲ. ಸಾವಿರಾರು ವರ್ಷಗಳಿಂದಲೂ ಇದೆ. ನಮ್ಮ ಪೂರ್ವಿಕರು ಅಣ್ಣ ತಮ್ಮಂದಿರಂತೆ‌ ಬದುಕಿದ್ದರು. ಧರ್ಮ ಜಾತಿಗಳು ಅವರ ಸ್ನೇಹಕ್ಕೆ ತಡೆಯಾಗಲಿಲ್ಲ. ಅವರ ಮಕ್ಕಳು, ಮೊಮ್ಮಕ್ಕಳಾದ ನಾವು ಮಾತ್ರ ಧರ್ಮ ರಕ್ಷಣೆಗಾಗಿ ಕತ್ತಿ ಹಿಡಿದು ಹೊರಟಿದ್ದೇವೆ. ಅಮಾಯಕರನ್ನು ಕೊಂದು, ಮುಗ್ಧ ಮಕ್ಕಳನ್ನು ತಬ್ಬಲಿ ಮಾಡಿ, ಇನ್ನೊಂದು ಕುಟುಂಬವನ್ನು ಅನಾಥ ಮಾಡಿ ಧರ್ಮ ಕಟ್ಟಬೇಕೆಂದು ಯಾವ ಧರ್ಮ ಕಲಿಸಿ ಕೊಟ್ಟಿದೆ ಹೇಳಿ? ಆದರೆ ಬುದ್ಧಿವಂತರ ಜಿಲ್ಲೆಯ ಜನತೆಗೆ ಇದು ಅರ್ಥವೇ ಆಗುತ್ತಿಲ್ಲ!

ಈ ನಾಡಿನ ಪ್ರಜ್ಞಾವಂತ ನಾಗರಿಕರು ಒಗ್ಗಟ್ಟಾಗ ಬೇಕಿದೆ. ಅನ್ಯಾಯದ ವಿರುದ್ಧ ನ್ಯಾಯ ಜಯಿಸಬೇಕಿದೆ, ಅಸತ್ಯದ ವಿರುದ್ಧ ಸತ್ಯದ ಮೆಲುಗೈ ಆಗಬೇಕಿದೆ. ಕೊಲೆಗೆ ಕೊಲೆ ಪರಿಹಾರವಲ್ಲ, ಅನ್ಯಾಯಕ್ಕೆ ಅನ್ಯಾಯ ಉತ್ತರವಲ್ಲ. ಭವಿಷ್ಯದ ಭಾರತದ ಬಗ್ಗೆ ಸುಂದರ ಕನಸು ಕಟ್ಟಿಕೊಂಡ ಮನುಷ್ಯ ಮನಸ್ಸುಗಳು ಧರ್ಮ ಜಾತಿ ಬದಿಗೊತ್ತಿ ಒಗ್ಗಟ್ಟಾಗ ಬೇಕು. ಅದಕ್ಕೆ ಸುನ್ನೀ ಸಂಘಟನೆಗಳ ಒಕ್ಕೂಟ ವೇದಿಕೆ ಒದಗಿಸುತ್ತಿದೆ.

ಮೂರ್ನಾಲ್ಕು ದಶಕಗಳಿಂದ ಶಾಂತಿಯ ಮಂತ್ರದ ಮೂಲಕ ಲಕ್ಷಾಂತರ ಶಿಸ್ತು ಬದ್ಧ ಯುವ ಸಮೂಹವನ್ನು ಕಟ್ಟಿ ಬೆಳೆಸಿದ ಅನುಗ್ರಹೀತ ಸಂಘಟನೆಗಳು ನಾಳೆ ಬೀದಿಗಿಳಿಯಲಿದೆ. ಈ ತನಕ ಕತ್ತಿ ಹಿಡಿಯದ, ರಕ್ತ ಹೀರದ, ನೆತ್ತರು ಹರಿಸದ ಪಕ್ವ ನೇತೃತ್ವದ ತಳಹದಿಯಲ್ಲಿ ಕಟ್ಟಿ ಬೆಳೆಸಿದ ಅನುಗ್ರಹೀತ ಸಂಘಟನೆ ನಿಮಗೆಲ್ಲರಿಗೂ ಆಹ್ವಾನ ನೀಡುತ್ತಿದೆ. ಧರ್ಮ ಜಾತಿ ವ್ಯತ್ಯಾಸವಿಲ್ಲದೆ ಮನುಷ್ಯತ್ವದ ಮೇಲೆ ನಂಬಿಕೆ ಉಳ್ಳ ಪ್ರತಿಯೊಬ್ಬರೂ ನಾಳೆಯ ದಿನ )ಡಿ.27)ಮಂಗಳೂರಿಗೆ ತಲುಪಬೇಕಿದೆ.

ಇದು ಧರ್ಮಕ್ಕಾಗಿ ಇರುವ ಹೋರಾಟವಲ್ಲ, ಮನುಷ್ಯತ್ವದ ಉಳಿವಿಗಾಗಿ ಇರುವ ಹೋರಾಟವಾಗಿದೆ. ಜನಸಾಗರವನ್ನು ಸೇರಿಸಿ ಗಟ್ಟಿಧ್ವನಿಯಲ್ಲಿ ಹೇಳೋಣ. ನ್ಯಾಯಕ್ಕೆ ನ್ಯಾಯ ಸಿಗುವವರೆಗೂ ಧ್ವನಿ ಎತ್ತೋಣ. ಧರ್ಮಾಂದರನ್ನು ಛೂ ಬಿಟ್ಟು ತೆರೆಮರೆಯಲ್ಲಿ ನಿಂತು ತನಗೆ ಸಿಗಬೇಕಾದ ಓಟಿನ ಲೆಕ್ಕ ಹಾಕುತ್ತಿರುವ ವಿಕೃತ ರಾಜಕಾರಣಿಗಳನ್ನು ಶಾಶ್ವತವಾಗಿ ಮನೆಯಲ್ಲಿ ಕೂರಿಸುವವರೆಗೆ ಹೋರಾಡೋಣ. ನಾಳೆಯ ಸಭೆ ಅದಕ್ಕೆ ಮೊದಲ ಹೆಜ್ಜೆಯಾಗಲಿ.

error: Content is protected !! Not allowed copy content from janadhvani.com