ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳ ಅಟ್ಟಹಾಸ ಎಲ್ಲೆ ಮೀರಿದ್ದು, ಅಲ್ಪ ಸಂಖ್ಯಾತ ಮುಸ್ಲಿಮರಿಗೆ ಅಭದ್ರತೆ ಕಾಡತೊಡಗಿದೆ. ಸುಳ್ಯ ಮಸೂದ್, ಮಂಗಳಪೇಟೆ ಫಾಝಿಲ್ ಹತ್ಯೆಯ ನೋವು ಮಾಸುವ ಮುನ್ನವೇ ಅಮಾಯಕ ಸಾದು ಸ್ವಭಾವದ ಜಲೀಲ್ ಹತ್ಯೆಯಾಗಿದೆ. ಯಾರ ತಂಟೆ ತಕರಾರಿಗೂ ಹೋಗದೆ ತನ್ನ ಪಾಡಿಗೆ ಇದ್ದ ಜಲೀಲ್ ಹತ್ಯೆಯಿಂದ ನಾಗರಿಕ ಸಮಾಜ ಭಯಭೀತ ಗೊಂಡಿದೆ.
ಇತ್ತೀಚಿಗೆ ಕರಾವಳಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ನೈತಿಕ ಪೋಲಿಸ್ ಗಿರಿ ಕೂಡ ನಡೆಯುತ್ತಿದೆ. ಇಂತಹ ಘಟನೆಗಳು ನಡೆದಾಗ ಕಾನೂನು ಬಿಗಿಯಾಗಿದ್ದರೆ ಇಂದು ಜಲೀಲ್ ಹತ್ಯೆ ನಡೆಯುತ್ತಿರಲಿಲ್ಲ. ಹತ್ಯೆಗಳನ್ನು ಧರ್ಮಗಳ ದೃಷ್ಟಿ ಯಲ್ಲಿ ತಾರತಮ್ಯ ಮಾಡುವ ಸರ್ಕಾರದ ನಡೆಯಿಂದ ಜಲೀಲ್ ಹತ್ಯೆಗೆ ನ್ಯಾಯ ಸಿಗಬಹುದೇ ಎಂಬ ಆತಂಕವೂ ಮೂಡಿದೆ.
ಸರ್ಕಾರ ಕೂಡಲೇ ಅರೋಪಿಗಳನ್ನು ಬಂಧಿಸಬೇಕು. ಪ್ರವೀಣ್ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಜಲೀಲ್ ಹತ್ಯೆಯನ್ನು ಪರಿಗಣಿಸಬೇಕು ಹಾಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು KCF ಅಂತರಾಷ್ಟ್ರೀಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.