janadhvani

Kannada Online News Paper

ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರು: ಷರತ್ತುಗಳಿಗೆ ಒಳಪಟ್ಟು ಯುಎಇಗೆ ಪ್ರವೇಶಿಸಲು ಅನುಮತಿ

ಪಾಸ್‌ಪೋರ್ಟ್‌ನ ಎರಡನೇ ಪುಟದಲ್ಲಿ ತಂದೆ ಅಥವಾ ಕುಟುಂಬದ ಹೆಸರಿದ್ದರೆ ಪ್ರವೇಶಕ್ಕೆ ಅವಕಾಶ ನೀಡುವ ಹೊಸ ಸಡಿಲಿಕೆ ಹಲವರಿಗೆ ಸಮಾಧಾನ ತಂದಿದೆ.

ದುಬೈ: ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರನ್ನು ಹೊಂದಿರುವ ಜನರು ಷರತ್ತುಗಳಿಗೆ ಒಳಪಟ್ಟು ಯುಎಇಗೆ ಪ್ರವೇಶಿಸಲು ಅನುಮತಿಸಲಾಗಿದೆ. ಈ ನಿಟ್ಟಿನಲ್ಲಿ ಯುಎಇ ರಾಷ್ಟ್ರೀಯ ಮುಂಗಡ ಮಾಹಿತಿ ಕೇಂದ್ರದಿಂದ(UAE national advance information centre) ಹೊಸ ಮಾರ್ಗಸೂಚಿಗಳು ಲಭಿಸಿದೆ ಎಂದು ಏರ್ ಇಂಡಿಯಾ (Air India) ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಏರ್ ಇಂಡಿಯಾ ಯುಎಇಯ ಎಲ್ಲಾ ಟ್ರಾವೆಲ್ ಏಜೆನ್ಸಿಗಳಿಗೆ ಪರಿಷ್ಕೃತ ಸುತ್ತೋಲೆ ಕಳುಹಿಸಿದೆ.

ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರನ್ನು ಹೊಂದಿರುವವರು (Given Name ಅಥವಾ Surname ಒಂದೇ ಹೆಸರು) ಮತ್ತು ತಮ್ಮ ಪಾಸ್‌ಪೋರ್ಟ್‌ನ ಎರಡನೇ ಪುಟದಲ್ಲಿ ತಂದೆಯ ಹೆಸರು ಅಥವಾ ಉಪನಾಮವನ್ನು ಹೊಂದಿರುವವರು ಸಂದರ್ಶಕ ವೀಸಾದಲ್ಲಿ ಯುಎಇಗೆ ಪ್ರವೇಶಿಸಬಹುದು ಎಂದು ಹೊಸ ಸುತ್ತೋಲೆ ಹೇಳುತ್ತದೆ.

ಪ್ರಸ್ತುತ ಯುಎಇಯಲ್ಲಿ ರೆಸಿಡೆಂಟ್ ಕಾರ್ಡ್ ಹೊಂದಿರುವ ವಲಸಿಗರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಂದರ್ಶಕರ ವೀಸಾ(Visit Visa) , ಆನ್ ಅರೈವಲ್ ವೀಸಾ(On Arrival Visa) , ಉದ್ಯೋಗ ವೀಸಾ(Employment Visa) ಮತ್ತು ತಾತ್ಕಾಲಿಕ ವೀಸಾದಲ್ಲಿ ಯುಎಇಗೆ ಪ್ರಯಾಣಿಸಲು ಯೋಜಿಸುವವರಿಗೆ ಹೊಸ ಷರತ್ತುಗಳು ಅನ್ವಯಿಸುತ್ತವೆ.

ಆದರೆ ಪಾಸ್‌ಪೋರ್ಟ್‌ನಲ್ಲಿ ಹೆಸರಿನಲ್ಲಿ ಒಂದೇ ಪದವಿದ್ದರೂ ಪಾಸ್‌ಪೋರ್ಟ್‌ನ ಎರಡನೇ ಪುಟದಲ್ಲಿ ತಂದೆ ಅಥವಾ ಕುಟುಂಬದ ಹೆಸರಿದ್ದರೆ ಸಂದರ್ಶಕರ ವೀಸಾದಲ್ಲಿ ಪ್ರವೇಶಕ್ಕೆ ಅವಕಾಶ ನೀಡುವ ಹೊಸ ಸಡಿಲಿಕೆ ಹಲವರಿಗೆ ಸಮಾಧಾನ ತಂದಿದೆ. ಟ್ರಾವೆಲ್ ಏಜೆನ್ಸಿಗಳಿಗೆ ಏರ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯನ್ನು ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ (Indian Consulate) ಕೂಡ ಟ್ವೀಟ್ ಮಾಡಿದೆ.