ರಿಯಾದ್: ಉಮ್ರಾ ನಿರ್ವಹಿಸಲು ಬಯಸುವವರಿಗೆ ಬಹು ಪ್ಯಾಕೇಜ್‌ಗಳನ್ನು ಸಿದ್ಧಪಡಿಸಿದ್ದಾಗಿ, ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು( Ministry of Hajj and Umrah) ಪ್ರಾರಂಭಿಸಿರುವ ‘ನುಸುಕ್’ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಹಾಗೂ ಮಕ್ಕಾ ಮತ್ತು ಮದೀನಾ ತಲುಪುವ ಪ್ರಕ್ರಿಯೆಯನ್ನು ಸರಳಗೊಳಿಸಲು ಹೊಸ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ. ಪ್ಯಾಕೇಜ್ ದರಗಳು 830 ಸೌದಿ ರಿಯಾಲ್‌ಗಳಿಂದ ($222) ಪ್ರಾರಂಭವಾಗುತ್ತವೆ.
ಪ್ಯಾಕೇಜ್‌ನಲ್ಲಿ ಭೇಟಿ ವೀಸಾ(Visit Visa) ಶುಲ್ಕ, ವಿಮಾ(Insurance) ಶುಲ್ಕ, ಮಕ್ಕಾದಲ್ಲಿ ಐದು ರಾತ್ರಿಗಳ ತಂಗುವಿಕೆ ಮತ್ತು ಜಿದ್ದಾ ವಿಮಾನ ನಿಲ್ದಾಣದಿಂದ ವಸತಿಗೆ ರೌಂಡ್ ಟ್ರಿಪ್ ಒಳಗೊಂಡಿದೆ. ಆದರೆ, ಸೌದಿ ಅರೇಬಿಯಾಕ್ಕೆ ಮತ್ತು ಅಲ್ಲಿಂದ ಮರಳುವ ವಿಮಾನ ಪ್ರಯಾಣದ ಟಿಕೆಟ್‌ಗಳು, ಊಟ ಮತ್ತು ಇತರ ವೈಯಕ್ತಿಕ ವೆಚ್ಚಗಳನ್ನು ಪ್ಯಾಕೇಜ್ ಒಳಗೊಂಡಿಲ್ಲ.
ಮಕ್ಕಾ ಮತ್ತು ಮದೀನಾ ನಡುವೆ ಕಾರ್ಯನಿರ್ವಹಿಸುವ ಹರಮೈನ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣದ ಸಮಯವನ್ನು ತಿಳಿದುಕೊಳ್ಳಲು ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸಲು ಸಹಾಯ ಮಾಡಲು ಅದರ ವೆಬ್‌ಸೈಟ್‌ಗೆ ಲಿಂಕ್ ಅನ್ನು ‘ನುಸುಕ್’ ಪ್ಲಾಟ್‌ಫಾರ್ಮ್‌ನಲ್ಲಿ ಒಳಪಡಿಸಲಾಗಿದೆ.
ಅಕ್ಟೋಬರ್ 10 ರಂದು ಹಜ್ ಉಮ್ರಾ ಸಚಿವಾಲಯವು ‘ನುಸುಕ್’ ಎಂಬ ಪರಿಷ್ಕೃತ ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿತು. ಈ ವೇದಿಕೆಯು ಹಜ್ ಮತ್ತು ಉಮ್ರಾಗೆ ಸಂಬಂಧಿಸಿದ ವಿವಿಧ ಸೇವೆಗಳು ಮತ್ತು ಮಾಹಿತಿಯನ್ನು ಹೊಂದಿದೆ.