janadhvani

Kannada Online News Paper

ಕಿನ್ಯಾ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ, ಸಾಮಾಜಿಕ ಮುತ್ಸದ್ದಿ ಹುಸೈನ್ ಕುಂಞಿ ಹಾಜಿ ನಿಧನ

ಕಿನ್ಯಾ,ಅ.8: ಕಿನ್ಯಾ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಹಿರಿಯ ಸಮಾಜ ಸೇವಕರೂ, ಉಮರಾ ಮುಖಂಡರೂ ಆಗಿರುವ ಹಾಜಿ ಹುಸೈನ್ ಕುಂಞಿ ಚಾಯರವಳಚ್ಚಿಲ್(86) ಅವರು ಅಲ್ಪಕಾಲದ ವಾರ್ಧಕ್ಯ ಸಹಜ ಅನಾರೋಗ್ಯದಿಂದ ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಹಲವಾರು ವರ್ಷ ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಇವರು ಕಿನ್ಯ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯಾಚರಿಸಿದ್ದರು.ಕಾಂಗ್ರೆಸ್ ಮುಖಂಡರಾಗಿದ್ದ ಹುಸೈನ್ ಕುಂಞ ಹಾಜಿಯವರು ವಕ್ಸ್ ಬೋರ್ಡ್ ಸದಸ್ಯರಾಗಿ, ತಲಪಾಡಿ ಮಂಡಲ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಹುಸೈನ್ ಹಾಜಿಯವರು ಕಿನ್ಯಾ ಗ್ರಾಮದ ಮುತ್ಸದ್ದಿ, ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಂಘ, ಸಂಸ್ಥೆಗಳ ನಿರ್ದೇಶಕರೂ, ಮುಂಚೂಣಿ ನಾಯಕರೂ ಆಗಿದ್ದರು. ಇವರು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ, ಆಸ್ಕರ್ ಪೆರ್ನಾನ್ಡಿಸ್, ಜನಾರ್ಧನ ಪೂಜಾರಿ, ಯು ಟಿ ಫರೀದ್ ರವರ ಆಪ್ತರಾಗಿದ್ದು, ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದರು.

ಕಿನ್ಯಾ ಕುರಿಯಕ್ಕಾರ್ ಮನೆತನದವರಾಗಿದ್ದ ಮೃತರು, ಕಿನ್ಯಾ ಕೇಂದ್ರ ಜುಮಾ ಮಸೀದಿಯ ಹಾಲಿ ಅಧ್ಯಕ್ಷರೂ, ಹಲವಾರು ಸಂಘ, ಸಂಸ್ಥೆಗಳ ನಿರ್ದೇಶಕರೂ ಸಮಾಜ ಸೇವಕರೂ ಆಗಿರುವ ಏಕ ಪುತ್ರ ಹಾಜಿ ಇಸ್ಮಾಯಿಲ್ ಹಾಗೂ ಆರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com