ಬೆಳ್ತಂಗಡಿ, ಸೆ.23: ಇತ್ತೀಚೆಗೆ ಸುಳ್ಯದ ಮಸೂದ್ ಮತ್ತು ಸುರತ್ಕಲ್‌ನ ಫಾಝಿಲ್ ಎಂಬಿಬ್ಬರ ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಬೆಳ್ತಂಗಡಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಎದುರು ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡುವಲ್ಲಿ ರಾಜ್ಯ ಸರ್ಕಾರ ತೋರಿರುವ ತಾರತಮ್ಯ ನೀತಿಯನ್ನು ಖಂಡಿಸಿ, ಇಸ್ಲಾಂ ಧರ್ಮದ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ, ಕಪೋಲ ಕಲ್ಪಿತ ಹೇಳಿಕೆಗಳನ್ನು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮದರಸಗಳ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ, ಇಸ್ಲಾಂ ಧರ್ಮದ ಬಗ್ಗೆ ಅಪನಂಬಿಕೆ ಉಂಟುಮಾಡುವ ರೀತಿಯ ಅಪಪ್ರಚಾರದ ಮಾಡುತ್ತಿರುವುದನ್ನು ವಿರೋಧಸಿ, ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟ ಇದರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಸಂಯುಕ್ತ ಒಗ್ಗೂಡುವಿಕೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ.ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್ ಬೆಳ್ತಂಗಡಿ, ಸೈಯ್ಯಿದ್ ಅಕ್ರಂ ಅಲೀ ತಂಙಳ್, ಐ.ಕೆ. ಮೂಸಾದಾರಿಮಿ ಕಕ್ಕಿಂಜೆ, ಬೆಳ್ತಂಗಡಿ ದಾರುಸ್ಸಲಾಂ ಶಿಕ್ಷಣ ಸಂಸ್ಥೆ ಪ್ರಧಾನ ಪ್ರಾಧ್ಯಾಪಕ ಇಸ್ಹಾಕ್ ಕೌಸರಿ, ಪೇರಾಲ್ದಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಮುಸ್ಲಿಂ ಸದಸ್ಯ ಅಬ್ದುರ್ರಝಾಕ್ ಕನ್ನಡಿಕಟ್ಟೆ, ಗುರುವಾಯನಕೆರೆ ದರ್ಗಾ ಸಮಿತಿ ಕಾರ್ಯದರ್ಶಿ ಉಮರ್ ಜಿ.ಕೆ., ಫಾಝಿಲ್ ಅವರ ತಂದೆ ಉಮರುಲ್ ಫಾರೂಕ್, ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ಇಸ್ಮಾಯಿಲ್ ಸಂಜಯನಗರ, ಜನಪರ ಚಳುವಳಿಗಾರ ದಮ್ಮಾನಂದ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಶೇಖರ್ ಲಾಯಿಲ, ಕೆ.ಎಸ್ ಅಬ್ದುಲ್ಲ ಕರಾಯ, ಹನೀಫ್ ಫೈಝಿ ಬೆಳ್ತಂಗಡಿ ಉಪಸ್ಥಿತರಿದ್ದರು.
ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಮುಸ್ಲಿಂ ಒಕ್ಕೂಟ ಸದಸ್ಯ ಅಬ್ದುಲ್ ಖಾದರ್ ನಿರೂಪಿಸಿದರು. ತಲ್‌ಹತ್ ಎಂ.ಜಿ ವಂದಿಸಿದರು.