janadhvani

Kannada Online News Paper

ಹಸಿದವರಿಗಾಗಿ ಅನ್ನ- ಉಚಿತ ಬ್ರೆಡ್ ಯೋಜನೆಯನ್ನು ಆರಂಭಿಸಿದ ದುಬೈ ಸರ್ಕಾರ

ಇದು ದಿನದ ವಿವಿಧ ಸಮಯಗಳಲ್ಲಿ ಬಡವರಿಗೆ ಮತ್ತು ಕಾರ್ಮಿಕರಿಗೆ ಉಚಿತ ಬ್ರೆಡ್ ನೀಡುವ ವ್ಯವಸ್ಥೆಯಾಗಿದೆ.

ದುಬೈ: ಹಸಿದವರಿಗೆ ಉಚಿತ ಆಹಾರ ನೀಡುವ ಸಲುವಾಗಿ “Bread for all”(ಎಲ್ಲರಿಗೂ ಆಹಾರ) ಯೋಜನೆಯನ್ನು ಆರಂಭಿಸಿದೆ ದುಬೈ ಸರ್ಕಾರ.

ಔಕಾಫ್ ಮತ್ತು ಮೈನರ್ಸ್ ಅಫೇರ್ಸ್ ಫೌಂಡೇಶನ್ (Awqaf and Minors Affairs Foundation) ಅಡಿಯಲ್ಲಿ ಮುಹಮ್ಮದ್ ಬಿನ್ ರಾಶಿದ್ ಗ್ಲೋಬಲ್ ಸೆಂಟರ್ ಫಾರ್ ಎಂಡೋಮೆಂಟ್ ಕನ್ಸಲ್ಟೆನ್ಸಿ (MBRGCEC) ನಿರ್ಗತಿಕ ಕುಟುಂಬಗಳು ಮತ್ತು ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಉಚಿತ ಬ್ರೆಡ್ ಯೋಜನೆಯನ್ನು ಘೋಷಿಸಿದೆ.

ಇದು ದಿನದ ವಿವಿಧ ಸಮಯಗಳಲ್ಲಿ ಬಡವರಿಗೆ ಮತ್ತು ಕಾರ್ಮಿಕರಿಗೆ ಉಚಿತ ಬ್ರೆಡ್ ನೀಡುವ ವ್ಯವಸ್ಥೆಯಾಗಿದೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ, ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರ ದೃಷ್ಟಿಕೋನವನ್ನು ಈ ಯೋಜನೆಯ ಮೂಲಕ ಸಾಕಾರಗೊಳಿಸಲಾಗಿದೆ.

ವಿವಿಧ ಮಳಿಗೆಗಳಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಯಂತ್ರಗಳ ಮೂಲಕ ಅಗತ್ಯವಿರುವವರಿಗೆ ತಾಜಾ ಬ್ರೆಡ್ ಅನ್ನು ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ. ಇದು ಲೋಕೋಪಕಾರದ ಆಧುನಿಕ ಮತ್ತು ಸಮರ್ಥನೀಯ ಮಾದರಿಯನ್ನು ಪ್ರಸ್ತುತಪಡಿಸುತ್ತದೆ.

ಅಲ್ ಮಿಶಾರ್, ಅಲ್ ವರ್ಕಾ, ಮಿರ್ದಿಫ್, ನಾದ್ ಅಲ್ ಶೆಬಾ, ನಾದ್ ಅಲ್ ಹಮರ್, ಅಲ್ ಖೂಸ್ ಮತ್ತು ಅಲ್ ಬದಾದಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಸ್ಮಾರ್ಟ್ ಯಂತ್ರಗಳನ್ನು ಅಳವಡಿಸಲಾಗುವುದು. ಯಂತ್ರದಲ್ಲಿ ಆರ್ಡರ್ ಬಟನ್ ಒತ್ತಿದ ನಂತರ ಸ್ವಲ್ಪ ಸಮಯದೊಳಗೆ ಬ್ರೆಡ್ ಸಿಗುವ ವ್ಯವಸ್ಥೆಯಾಗಿದೆ.

ಈ ಯೋಜನೆಗಯನ್ನು ಬೆಂಬಲಿಸಲು ದೇಣಿಗೆ ನೀಡುವ ಕಾರ್ಯವಿಧಾನವನ್ನು ಸಹ ಯಂತ್ರದಲ್ಲಿ ಅಳವಡಿಸಲಾಗಿದೆ.ಎಸ್‌ಎಂಎಸ್ ಮೂಲಕವೂ ದೇಣಿಗೆ ನೀಡಬಹುದಾಗಿದೆ. 10 ದಿರ್ಹಂ ದೇಣಿಗೆ ನೀಡಲು 3656 ಗೆ SMS ಕಳುಹಿಸಬಹುದು, 50 ದಿರ್ಹಂ ನೀಡಲು 3658 ಗೆ, 100 ದಿರ್ಹಂ ನೀಡಲು 3659 ಕ್ಕೆ ಹಾಗೂ 500 ದಿರ್ಹಮ್‌ ನೀಡಲು ಬಯಸುವವರು 3679 ಗೆ ಎಸ್‌ಎಂಎಸ್ ಕಳಿಸಬಹುದಾಗಿದೆ.

DubaiNow ಮೊಬೈಲ್ ಆ್ಯಪ್ ಮತ್ತು ಆನ್‌ಲೈನ್‌ನಲ್ಲಿ www.mbrgcec.ae ನಲ್ಲೂ ದೇಣಿಗೆ ನೀಡಬಹುದು.

error: Content is protected !! Not allowed copy content from janadhvani.com