ಕೋಝಿಕ್ಕೋಡ್ | ಡಿ ಲಿಟ್(D.Litt) ವಿವಾದ ಸಂಬಂಧಿಸಿದಂತೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ (Indian Grand Mufthi) ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಪ್ರತಿಕ್ರಿಯೆ ನೀಡಿದೆ.
ವಿಶ್ವವಿದ್ಯಾಲಯ ಕಮ್ಯುನಿಟಿಯ ಹೊರಗಿನವರಿಗೆ ಗೌರವ (Honorary) ಪದವಿಗಳನ್ನು ನೀಡುವುದರ ಮೇಲೆ ಕೇಂದ್ರೀಕರಿಸುವುದರ ಬದಲು, ಬಹು ನಿರೀಕ್ಷೆಯಿಂದ ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸುವ ವಿಶ್ವವಿದ್ಯಾನಿಲಯದ ಒಳಗಿನ ಸಮುದಾಯದ ಬೌದ್ಧಿಕ ಹಿತಾಸಕ್ತಿಗಳನ್ನು ಪರಿಹರಿಸುವಲ್ಲಿ ಮತ್ತು ಗುಣಮಟ್ಟದ ಪದವಿಗಳನ್ನು ಒದಗಿಸುವಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯವು (Calicut University) ಗಮನಹರಿಸಬೇಕಾಗಿದೆ ಎಂದು ಗ್ರ್ಯಾಂಡ್ ಮುಫ್ತಿ ಅವರ ಕಚೇರಿಯು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಕೇಳಿಕೊಂಡಿದೆ.
ಡಿಲಿಟ್ ಪದವಿ ನೀಡುವ ಸಂಬಂಧಿತ ಅನಗತ್ಯ ಚರ್ಚೆಯಿಂದ ಕಾಂತಪುರಂ ಅವರ ಹೆಸರನ್ನು ಹೊರಗಿಡುವಂತೆಯೂ ಪತ್ರದಲ್ಲಿ ಕೋರಲಾಗಿದೆ.
ಪತ್ರದ ಸಂಕ್ಷಿಪ್ತ ರೂಪ
“ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮತ್ತು ಮರ್ಕಝ್ ಸಂಸ್ಥಾಪಕ ಗೌರವಯುತ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರಿಗೆ ಡಿ ಲಿಟ್ ನೀಡಲು ಕ್ಯಾಲಿಕಟ್ ವಿಶ್ವವಿದ್ಯಾಲಯದ ಸಿಂಡಿಕೇಟ್‌ನಲ್ಲಿ ನಿರ್ಣಯ ಮಂಡಿಸಲಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ಕೋರಿ ಹಲವಾರು ಪತ್ರಕರ್ತರು ನಿನ್ನೆ ನಮ್ಮನ್ನು ಸಂಪರ್ಕಿಸಿದ್ದಾರೆ. ಸನ್ಮಾನ್ಯ ಗ್ರ್ಯಾಂಡ್ ಮುಫ್ತಿಯವರ ಕಛೇರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯೂ ನಮ್ಮ ಗಮನಕ್ಕೆ ಬಂದಿದೆ.”
“ಕೇರಳದ ಅತಿದೊಡ್ಡ ವಿಶ್ವವಿದ್ಯಾನಿಲಯವಾಗಿ ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಕ್ಯಾಲಿಕಟ್ ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರವಾದ ಜವಾಬ್ದಾರಿಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಮರ್ಕಝ್ ತನ್ನ ಹಲವು ಶೈಕ್ಷಣಿಕ ಯೋಜನೆಗಳನ್ನು ಆರಂಭಿಸಲು ಆಯ್ಕೆ ಮಾಡಿದ, ಮಲಬಾರ್ ಮೂಲದ ವಿಶ್ವವಿದ್ಯಾನಿಲಯವೆಂಬ ನೆಲೆಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಚಟುವಟಿಕೆಗಳನ್ನು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮತ್ತು ಮರ್ಕಝ್ ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದೆ”
“ಉನ್ನತ ಶಿಕ್ಷಣವು ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ,ಶಿಕ್ಷಣ ಸಂಸ್ಥೆಯು ತನ್ನ ಶಕ್ತಿಯನ್ನು ಪ್ರಮುಖ ಮತ್ತು ಪ್ರಾಥಮಿಕವಾಗಿ ಶೈಕ್ಷಣಿಕ ಚಟುವಟಿಕೆಗಳ ಗುಣಮಟ್ಟವನ್ನು ಸುಧಾರಿಸಲು ವಿನಿಯೋಗಿಸಬೇಕು ಎಂಬುದು ಮರ್ಕಝ್ ನ ನಂಬಿಕೆಯಾಗಿದೆ”
“ಈ ಕ್ಷೇತ್ರದಲ್ಲಿ ಕೇರಳ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಅನುಕೂಲಕರ ಪರಿಸ್ಥಿತಿಗಳನ್ನು ಹೊಂದಿರುವ ಒಂದು ವಿಶ್ವವಿದ್ಯಾನಿಲಯ ಎಂಬ ನೆಲೆಯಲ್ಲಿ ಈ ಕ್ಷೇತ್ರದಲ್ಲಿ ನಾಯಕತ್ವದ ಪಾತ್ರ ವಹಿಸಲು ಕ್ಯಾಲಿಕಟ್ ವಿಶ್ವವಿದ್ಯಾಲಯಕ್ಕೆ ಸಾಧ್ಯವಿದೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶಿಕ್ಷಕರ ಶ್ರೇಷ್ಠತೆಯನ್ನು ಖಾತ್ರಿಪಡಿಸುವ ಚಟುವಟಿಕೆಗಳಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯವು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬುದು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮತ್ತು ಮರ್ಕಝ್ ನ ಆಸಕ್ತಿಯಾಗಿದೆ”
“ವಿಶ್ವವಿದ್ಯಾನಿಲಯದ ಕಮ್ಯುನಿಟಿಯ ಹೊರಗಿನವರಿಗೆ ಗೌರವ ಪದವಿಗಳನ್ನು ನೀಡುವತ್ತ ಗಮನಹರಿಸದೆ, ವಿಶ್ವವಿದ್ಯಾನಿಲಯದಲ್ಲಿ ಭರವಸೆಯನ್ನಿಟ್ಟು ಬರುವ ವಿಶ್ವವಿದ್ಯಾನಿಲಯದ ಒಳಗಿನ ಕಮ್ಯುನಿಟಿಯ ಬೌದ್ಧಿಕ ಹಿತಾಸಕ್ತಿಗಳನ್ನು ಪರಿಹರಿಸುವ ಮತ್ತು ಗುಣಮಟ್ಟದ ಪದವಿಗಳನ್ನು ನೀಡುವತ್ತ ಈ ಸಂಸ್ಥೆಯು ಗಮನಹರಿಸಬೇಕಾಗಿದೆ. ಆ ಮೂಲಕ ಮಲಬಾರ್ ಅನ್ನು ಶಿಕ್ಷಣ ಕೇಂದ್ರವನ್ನಾಗಿ ಮಾಡಲು ನಮಗೆ ಸಾಧ್ಯವಾಗಬೇಕಿದೆ”
“ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವ ಸಂಸ್ಥೆಗಳಾಗಿ, ಮರ್ಕಝ್, ಮರ್ಕಝ್ ನಾಲೆಡ್ಜ್ ಸಿಟಿ ಮತ್ತು ಸಂಬಂಧಿತ ಉಪಕ್ರಮಗಳು ವಿಶ್ವವಿದ್ಯಾನಿಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಚಟುವಟಿಕೆಯ ಹಲವು ಕ್ಷೇತ್ರಗಳನ್ನು ಹೊಂದಿವೆ. ಅಂತಹ ಚಟುವಟಿಕೆಗಳಿಗೆ ಮರ್ಕಝ್ ನ ಅಂತರರಾಷ್ಟ್ರೀಯ ಸಂಬಂಧಗಳನ್ನು ಒದಗಿಸುವುದು ಸೇರಿದಂತೆ ಎಲ್ಲಾ ರೀತಿಯ ಬೆಂಬಲವನ್ನು ಮರ್ಕಝ್ ಭರವಸೆ ನೀಡುತ್ತದೆ”
“ಡಿಲಿಟ್ ಅನುಮತಿ ನೀಡುವ ಸಂಬಂಧಿತ ಚರ್ಚೆಗಳಿಂದ, ಸನ್ಮಾನ್ಯ. ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಹೆಸರನ್ನು ಕೈಬಿಡುವಂತೆ ಮನವಿ. ಬಿಕ್ಕಟ್ಟಿನಿಂದ ಕೂಡಿರುವ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯವು ಹೆಚ್ಚು ಅಗತ್ಯವಾದ ಬದಲಾವಣೆಗಳನ್ನು ತರಲು ಸಾಧ್ಯವಾಗಲಿ”ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನಿರ್ಣಯದಲ್ಲಿ ಏನಿದೆ?
ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮತ್ತು ವೆಳ್ಳಾಪಳ್ಳಿ ನಡೇಶನ್ ಅವರಿಗೆ ಡಾಕ್ಟರೇಟ್ ಗೌರವ ಪ್ರದಾನ ಮಾಡುವುದು ನಿರ್ಣಯವಾಗಿತ್ತು.
ಕಳೆದ ದಿನ ನಡೆದ ಸಿಂಡಿಕೇಟ್ ಸಭೆಯಲ್ಲಿ ಎಡಪಂಥೀಯ ಬೆಂಬಲಿಗ ಇ. ಅಬ್ದುರ್ರಹೀಮ್ ಅವರು ಉಪಕುಲಪತಿಯವರ ಅನುಮತಿಯೊಂದಿಗೆ ಪ್ರಸ್ತಾವನೆಯನ್ನು ಮಂಡಿಸಿದರು. ನಿರ್ಣಯದ ಪ್ರಕಾರ, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮತ್ತು ವೆಳ್ಳಾಪಳ್ಳಿ ನಡೇಶನ್ ಅವರು ತಮ್ಮ ಸ್ವಂತ ಕುಟುಂಬಗಳಿಗೆ ಹಣ ಸಂಗ್ರಹಿಸಲು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿಲ್ಲ.
ಕೇರಳದ ಎಲ್ಲಾ ವಿದ್ಯಾರ್ಥಿಗಳಿಗೆ ನುಜೆನ್ ಕೋರ್ಸ್‌ಗಳು ಲಭ್ಯವಾಗುವಂತೆ ಮಾಡಲು ಕಾಂತಪುರಂ ಇತರ ದೇಶಗಳೊಂದಿಗೆ ಸಂವಹನ ನಡೆಸುವ ಕ್ರಾಂತಿಕಾರಿ ಕೆಲಸವನ್ನು ಮಾಡುತ್ತಿದ್ದಾರೆ. ವೆಳ್ಳಾಪಳ್ಳಿ ನಡೇಶನ್ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಡಿ ಲಿಟ್ ನೀಡಲು ನೇಮಿಸಿರುವ ಉಪ ಸಮಿತಿ ಇಬ್ಬರ ವಿವರಗಳನ್ನು ಅಧ್ಯಯನ ಮಾಡಬೇಕು ಎಂದೂ ನಿರ್ಣಯದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಸಿಂಡಿಕೇಟ್ ಸದಸ್ಯರ ಒಂದು ವಿಭಾಗವು ಡಿ-ಲಿಟ್ ನೀಡಲು ಕೋರಿರುವ ಪ್ರಸ್ತಾವನೆಗೆ ಅವಕಾಶ ನೀಡಬಾರದು ಮತ್ತು ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಆದರೆ ವಿಸಿ ಅನುಮತಿ ಪಡೆದು ಮಂಡಿಸಿದ ನಿರ್ಣಯವನ್ನು ಅಂಗೀಕರಿಸಬೇಕು ಎಂದು ನಿರೂಪಕರು ತಿಳಿಸಿದ್ದಾರೆ. ವಿವಾದದ ಕೊನೆಯಲ್ಲಿ, ಸಿಂಡಿಕೇಟ್ ಡಿ ಲಿಟ್ ನೀಡಲು ಪ್ರಖ್ಯಾತ ವ್ಯಕ್ತಿಗಳನ್ನು ಹುಡುಕಲು ರಚಿಸಲಾದ ಸಮಿತಿಗೆ ನಿರ್ಣಯವನ್ನು ಉಲ್ಲೇಖಿಸಲು ನಿರ್ಧರಿಸಲಾಗಿದೆ







