janadhvani

Kannada Online News Paper

ಚಾಮರಾಜಪೇಟೆ ಈದ್ಗಾ ಮೈದಾನ: ಗಣೇಶ ಉತ್ಸವಕ್ಕೆ ಅವಕಾಶವಿಲ್ಲ- ಹೈಕೋರ್ಟ್

ನ್ಯಾಯಾಲಯದ ಆದೇಶ ನಮಗೆ ಸಂತೋಷತಂದಿದೆ- ಶಾಫಿ ಸಅದಿ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿ BBMP ಆದೇಶದ ವಿರುದ್ಧ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶವಿಲ್ಲ. ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪಿಸಲು ಆವಕಾಶವಿಲ್ಲ. ಬಕ್ರೀದ್ ಮತ್ತು ರಂಜಾನ್ ಹಬ್ಬದ ಪ್ರಾರ್ಥನೆಗೆ ಯಥಾಪ್ರಕಾರ ಅವಕಾಶ ನೀಡಲಾಗಿದೆ. ಹಾಗೂ ಚಾಮರಾಜಪೇಟೆ ಈದ್ಗಾ ಜಾಗವನ್ನು ಆಟದ ಮೈದಾನವಾಗಿಯೂ ಬಳಕೆ ಮಾಡಲು, ಮೊದಲು ಇದ್ದಂತೆ ಯಥಾಸ್ಥಿತಿ ಕಾಯಲು ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಹಾಗೂ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಲಾಗಿದೆ.

ಮೈದಾನದ ಮಾಲೀಕತ್ವ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಂದೆಯೇ ಗೆಜೆಟ್ ನೋಟೀಫಿಕೇಶನ್ ಆಗಿದೆ. ಸುಪ್ರೀಂ ಕೋರ್ಟ್ ಆದೇಶ ಕೂಡಾ ಇದೆ. ಮಕ್ಕಳು ಆಟ ಆಡಲು ಅನುಮತಿ ಇದೆ. ವರ್ಷಕ್ಕೆ ಎರಡು ಬಾರಿ ನಮಾಜ್ ಗೆ ಅನುಮತಿ ಇದೆ ಎಂದು ವಕ್ಫ್ ಬೋರ್ಡ್ ಪರ ವಕೀಲ ಮಾಹಿತಿ ನೀಡಿದರು.

ಮತ್ತೊಂದೆಡೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿದ್ದು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರ ಹೈಕೋರ್ಟ್ ಆದೇಶದಂತೆ ಯಥಾಸ್ಥಿತಿ ಕಾಪಾಡುತ್ತೇವೆ. ಗಣೇಶೋತ್ಸವ ಸಂಬಂಧ 7 ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಗಣೇಶೋತ್ಸವ ಮಾಡಬೇಡಿ ಎಂದು 2 ಸಂಘಟನೆ ಅರ್ಜಿ ಸಲ್ಲಿಸಿವೆ. ಹೈಕೋರ್ಟ್ ಆದೇಶ ಸಂಬಂಧ ಸರ್ಕಾರದ ಜತೆ ಚರ್ಚಿಸುತ್ತೇವೆ. ಈದ್ಗಾ ಮೈದಾನ ಸಂಬಂಧ ಹೈಕೋರ್ಟ್ ಆದೇಶ ಪಾಲಿಸುತ್ತೇವೆ ಎಂದರು.

ನ್ಯಾಯಾಲಯದ ಆದೇಶ ನಮಗೆ ಸಂತೋಷತಂದಿದೆ- ಶಾಫಿ ಸಅದಿ

ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಬೆನ್ನಲೆ ಬೆಂಗಳೂರಿನಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಮುಹಮ್ಮದ್ ಶಾಫಿ ಸಆದಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನ್ಯಾಯಾಲಯದ ಆದೇಶ ನಮಗೆ ಸಂತೋಷತಂದಿದೆ. ಚಾಮರಾಜಪೇಟೆಯಲ್ಲಿ ಇರುವುದು ನಮ್ಮ‌ ಈದ್ಗಾ ಮೈದಾನ. ಬಿಬಿಎಂಪಿ ಹಾಗೂ ನಮಗೂ ವ್ಯಾಜ್ಯ ಇತ್ತು. ಈಗಾಗಲೇ ಸುಪ್ರೀಂಕೋರ್ಟ್ ಆದೇಶ ಸಹ ಮಾಡಿತ್ತು. BBMP ಜಂಟಿ ಆಯುಕ್ತ ಸ್ವಲ್ಪ ಎಡವಟ್ಟು ಮಾಡಿಕೊಂಡಿದ್ದಾರೆ. ಮೈದಾನ ಸಂಬಂಧ ಈಗ ನ್ಯಾಯಾಲಯ ಆದೇಶ ಮಾಡಿದೆ ಎಂದರು.

error: Content is protected !! Not allowed copy content from janadhvani.com