ಬೆಂಗಳೂರು: ರಾಜ್ಯಾದ್ಯಂತ ಮಸೀದಿಯಲ್ಲಿ ಧ್ವನಿವರ್ಧಕ ಮೂಲಕ ಆಜಾನ್ ಕೂಗುವುದಕ್ಕೆ ನಿರ್ಬಂಧ ಹೇರಲು ಸರ್ಕಾರಿ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಹೈಕೋರ್ಟ್,ಆಜಾನ್‌ನಿಂದ ಜನರ ಮೂಲಭೂತ ಹಕ್ಕು ಮೊಟಕುಗೊಳ್ಳುವುದಿಲ್ಲ ಎಂದು ಹೇಳಿದೆ.
ಧ್ವನಿವರ್ಧಕಗಳು ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವಾಗದಂತೆ ಸರ್ಕಾರಿ ಪ್ರಾಧಿಕಾರಗಳು ಅಗತ್ಯ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.
ಈ ಕುರಿತು ನಗರದ ನಾಗರಭಾವಿ ನಿವಾಸಿ ಆರ್. ಚಂದ್ರಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಆಜಾನ್ ಕೂಗುವುದರಿಂದ ಉಂಟಾಗುವ ಶಬ್ದದಿಂದಾಗಿ ಇತರ ಜನರ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ನಿರಾಕರಿಸಿದೆ.
ಸಂವಿಧಾನದ ಪರಿಚ್ಛೇದ 25(1)ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮವನ್ನು ಆಚರಿಸುವ, ಪ್ರದರ್ಶಿಸುವ ಮತ್ತು ಪ್ರಚಾರ ಮಾಡುವ ಹಕ್ಕು ಹೊಂದಿರುತ್ತಾನೆ ಎಂದು ತಿಳಿಸಿದೆ.
ಅರ್ಜಿದಾರರು ಸೇರಿದಂತೆ ಪ್ರತಿಯೊಬ್ಬರೂ ಸಹ ತಮ್ಮ ಧರ್ಮ ಆಚರಿಸಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆಜಾನ್ ಎಂಬುದು ಇಸ್ಲಾಂ ಧರ್ಮದವರಿಗೆ ಪ್ರಾರ್ಥನೆ ಸಲ್ಲಿಸಲು ನೀಡುವ ಕರೆ ಎಂದು ಹೈಕೋರ್ಟ್ ಇದೇ ವೇಳೆ ಹೇಳಿದೆ.
ಅರ್ಜಿದಾರರು ಸೇರಿದಂತೆ ಪ್ರತಿಯೊಬ್ಬರೂ ಸಹ ತಮ್ಮ ಧರ್ಮ ಆಚರಿಸಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆಜಾನ್ ಎಂಬುದು ಇಸ್ಲಾಂ ಧರ್ಮದವರಿಗೆ ಪ್ರಾರ್ಥನೆ ಸಲ್ಲಿಸಲು ನೀಡುವ ಕರೆ ಮತ್ತು ಅರ್ಜಿದಾರರೇ ತಮ್ಮ ಅರ್ಜಿಯಲ್ಲಿ ಹೇಳಿರುವಂತೆ ಇಸ್ಲಾಂ ಧರ್ಮದ ವ್ಯಕ್ತಿಗೆ ಆಜಾನ್ ಎಂಬುದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿತು.
ಆಜಾನ್ ಕೂಗುವುದು ಮುಸ್ಲಿಮರ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದ್ದರೂ, ಅದರಲ್ಲಿ ಬಳಸುವ ಅಲ್ಲಾಹು ಅಕ್ಬರ್ (ಅಲ್ಲಾಹನೇ ಸರ್ವಶ್ರೇಷ್ಠ) ಎಂಬ ಶಬ್ದ ಇತರರ ಧಾರ್ಮಿಕ ನಂಬಿಕಗಳಿಗೆ ಧಕ್ಕೆ ತರುತ್ತದೆ. ಆದ್ದರಿಂದ ರಾಜ್ಯಾದ್ಯಂತ ಮಸೀದಿಯಲ್ಲಿ ಧ್ವನಿವರ್ಧಕ ಮೂಲಕ ಆಜಾನ್ ಕೂಗುವುದಕ್ಕೆ ನಿರ್ಬಂಧ ಹೇರಲು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.