janadhvani

Kannada Online News Paper

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ

ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಸಿಂಗ್, 1991ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು.

ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಾ. ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. 1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಸಿಂಗ್, 2024ರ ಏಪ್ರಿಲ್ನಲ್ಲಿ ಅವರ ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿತ್ತು. ಈ ಮೂಲಕ ಅವರು ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಕಾಲ ಇದ್ದರು.

2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಅವರು ಈ ಹಿಂದೆ 1998 ರಿಂದ 2004 ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಹೊಂದಿದ್ದರು. ಸಿಂಗ್ ಅವರು ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು 2009 ರಲ್ಲಿ ಅದೇ ದಿನಾಂಕದಂದು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದರು.

ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಸಿಂಗ್, 1991ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬಳಿಕ 2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದರು.

ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು. ಅವರ ಕೃತಿ ಭಾರತದ ರಫ್ತು ಸ್ಥಿತಿ ಮತ್ತು ಸ್ವಾವಲಂಬಿ ಸುಸ್ಥಿರ ಪ್ರಗತಿಯಲ್ಲಿ ಅದರ ಭವಿಷ್ಯ “India’s Export Trends and Prospects for Self-Sustained Growth” [Clarendon Press, Oxford, 1964] ಭಾರತದ ಆಂತರಿಕ ಆಧಾರಿತ ವ್ಯಾಪಾರ ನೀತಿಯ ಆರಂಭಿಕ ವಿಮರ್ಶೆಯಾಗಿತ್ತು.

ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಳಗಾವಿಯಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.

error: Content is protected !! Not allowed copy content from janadhvani.com