janadhvani

Kannada Online News Paper

ಯುಎಇ: ಗ್ರೀನ್ ವೀಸಾ, ಹತ್ತು ವಿಧದ ವಿಸಿಟ್ ವೀಸಾಗಳು ಮುಂದಿನ ತಿಂಗಳಲ್ಲಿ ಜಾರಿ

ಉದ್ಯೋಗಾಕಾಂಕ್ಷಿಗಳಿಗೆ ಪ್ರಾಯೋಜಕರ ಅಗತ್ಯವಿಲ್ಲದ ಹೊಸ ಸಂದರ್ಶಕರ ವೀಸಾವನ್ನು ಮುಂದಿನ ತಿಂಗಳಿನಿಂದ ನಿರೀಕ್ಷಿಸಲಾಗಿದೆ.

ಅಬುಧಾಬಿ: ಕಳೆದ ಏಪ್ರಿಲ್‌ನಲ್ಲಿ ಯುಎಇ ಸರ್ಕಾರ ಘೋಷಿಸಿದ ಹೊಸ ವೀಸಾಗಳು ಮುಂದಿನ ತಿಂಗಳು ಜಾರಿಗೆ ಬರಲಿವೆ. ಐದು ವರ್ಷಗಳ ಗ್ರೀನ್ ವೀಸಾ, ಮಲ್ಟಿಪಲ್ ಎಂಟ್ರಿ ಟೂರಿಸ್ಟ್ ವೀಸಾ, ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಎಂಟ್ರಿ ಪರ್ಮಿಟ್ , ವೈದ್ಯಕೀಯ ಮತ್ತು ಶೈಕ್ಷಣಿಕ ವೀಸಾ ಇತ್ಯಾದಿಗಳು ಮುಂದಿನ ತಿಂಗಳು ಜಾರಿಗೆ ಬರಲಿವೆ.

ಪ್ರಾಯೋಜಕರು ಅಥವಾ ಉದ್ಯೋಗದಾತರಿಲ್ಲದೆ ಯುಎಇಯಲ್ಲಿ ಐದು ವರ್ಷಗಳವರೆಗೆ ಕೆಲಸ ಮಾಡಲು ಮತ್ತು ವಾಸಿಸಲು ಅವಕಾಶ ಮಾಡಿಕೊಡುವುದಾಗಿದೆ ಗ್ರೀನ್ ವೀಸಾ. ಸ್ವಯಂ ಉದ್ಯೋಗ, ಸ್ವತಂತ್ರ ಕೆಲಸ ಮತ್ತು ನುರಿತ ಕೆಲಸಗಾರರು ಮುಖ್ಯವಾಗಿ ಐದು ವರ್ಷಗಳ ಹಸಿರು ವೀಸಾಗೆ ಅರ್ಹರಾಗಿರುತ್ತಾರೆ.

  • ನುರಿತ ಕೆಲಸಗಾರರಿಗೆ ಕನಿಷ್ಠ ಪದವಿಯ ಅಗತ್ಯವಿದೆ.ಪದವಿ ಅಥವಾ ಡಿಪ್ಲೊಮಾ ಹೊಂದಿರಬೇಕು.
  • ವೇತನವು ತಿಂಗಳಿಗೆ ಕನಿಷ್ಠ 15,000 ದಿರ್ಹಮ್‌ಗಳಾಗಿರಬೇಕು.
  • ಯುಎಇಯಲ್ಲಿ ಯಾವುದೇ ಸಂಸ್ಥೆಯೊಂದಿಗೆ ಉದ್ಯೋಗ ಒಪ್ಪಂದವನ್ನು ಹೊಂದಿರಬೇಕು.
  • ಕಾರ್ಮಿಕ ಸಚಿವಾಲಯದಿಂದ ಸ್ವಯಂ ಉದ್ಯೋಗ ಪರವಾನಗಿಯನ್ನು ಪಡೆಯಬೇಕು.
  • ಹಿಂದಿನ ವರ್ಷದಲ್ಲಿ ಕನಿಷ್ಠ Dhs 3,60,000 ಆದಾಯ ಗಳಿಸಿರಬೇಕು.

ಮುಂತಾದ ನಿಯಮಗಳು ಮತ್ತು ಷರತ್ತುಗಳಿವೆ.

ಯುಎಇಯಲ್ಲಿ ವಾಸಿಸುವ ಮಹಿಳೆಯ ಗಂಡ ಮರಣ ಹೊಂದಿದ ಸಂದರ್ಭದಲ್ಲೂ ಮಾನವೀಯ ಪರಿಗಣನೆಯ ಆಧಾರದ ಮೇಲೆ ಗ್ರೀನ್ ವೀಸಾ ನೀಡಲಾಗುತ್ತದೆ.

ಯುಎಇಯಲ್ಲಿ ಉಳಿದು, ಇತರ ದೇಶಗಳ ಕೆಲಸ ಮಾಡಲು ಒಂದು ವರ್ಷದ ಗ್ರೀನ್ ವೀಸಾ ಮತ್ತು ರಿಯಲ್ ಎಸ್ಟೇಟ್ ಮಾಲೀಕರು ಎರಡು ವರ್ಷಗಳ ಗ್ರೀನ್ ವೀಸಾಗೆ ಅರ್ಹರಾಗಿರುತ್ತಾರೆ.

ಹಸಿರು ವೀಸಾ ಹೊಂದಿರುವವರು ತಮ್ಮ ಪ್ರಾಯೋಜಕತ್ವದಲ್ಲಿ ಕುಟುಂಬವನ್ನು ಕರೆತರಲು ಅವಕಾಶವಿದೆ.25 ವರ್ಷಗಳೊಳಗಿನ ಗಂಡು ಮಕ್ಕಳು, ವಯಸ್ಸಿನ ಮಿತಿಯಿಲ್ಲದೆ ಹೆಣ್ಣು ಮಕ್ಕಳನ್ನು ಪ್ರಾಯೋಜಿಸಬಹುದು ಎಂದು ಈ ಹಿಂದೆ ಸ್ಪಷ್ಟಪಡಿಸಲಾಗಿತ್ತು.

ಉದ್ಯೋಗಾಕಾಂಕ್ಷಿಗಳಿಗೆ ಪ್ರಾಯೋಜಕರ ಅಗತ್ಯವಿಲ್ಲದ ಹೊಸ ಸಂದರ್ಶಕರ ವೀಸಾವನ್ನು ಮುಂದಿನ ತಿಂಗಳಿನಿಂದ ನಿರೀಕ್ಷಿಸಲಾಗಿದೆ. ಚಿಕಿತ್ಸೆ ಮತ್ತು ಶಿಕ್ಷಣದಂತಹ ವಿವಿಧ ಉದ್ದೇಶಗಳಿಗಾಗಿ ಹತ್ತು ವಿಧದ ಸಂದರ್ಶಕ ವೀಸಾಗಳನ್ನು ಏಪ್ರಿಲ್‌ನಲ್ಲಿ ಯುಎಇ ಘೋಷಿಸಿತ್ತು. ಹೊಸ ವೀಸಾಗಳು ವಲಸಿಗರು ಮತ್ತು ಯುಎಇಗೆ ಭೇಟಿ ನೀಡುವವರಿಗೆ ಹೆಚ್ಚು ಪ್ರಯೋಜನಕಾರಿ ಎಂದು ನಿರೀಕ್ಷಿಸಲಾಗಿದೆ.

ಹೊಸ ಕ್ರಮವು ವಿದೇಶಿ ಹೂಡಿಕೆದಾರರಿಗೆ ಯುಎಇಯನ್ನು ಸೂಕ್ತ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.