✍️ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ
ಹತ್ತು ಹಲವು ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾದ ಪವಿತ್ರ ಮುಹರ್ರಂ ತಿಂಗಳು ಹಿಜರಿ ಲೆಕ್ಕಾನುಸಾರ ಪ್ರಥಮ ತಿಂಗಳಾಗಿದೆ ಹಾಗೂ ಯುದ್ಧ ನಿಷಿದ್ಧವಾದ ನಾಲ್ಕು ತಿಂಗಳಲ್ಲಿ ಒಂದಾಗಿರುತ್ತದೆ. ಅಲ್ಲಾಹನಲ್ಲಿ ನಂಬಿಕೆಯಿಡುವ ಮುಸ್ಲಿಮರು ತಮ್ಮೆಲ್ಲಾ ಕಾರ್ಯಗಳಿಗೂ ಹಿಜರಿ ವರ್ಷವನ್ನೇ ಅವಲಂಬಿಸಬೇಕಾದುದು ಅನಿವಾರ್ಯ ಮಾತ್ರವಲ್ಲ ಕ್ರಮ ಬದ್ಧವಾಗಿರುತ್ತದೆ. ಇನ್ನು, ಎಲ್ಲದಕ್ಕೂ ಪ್ರವಾದಿವರ್ಯರ ಹದೀಸನ್ನೇ ಕೇಳುವ ನವೀನವಾದಿಗಳಿಗೆ ಹಿಜರಿ ಲೆಕ್ಕವನ್ನು ಅಂಗೀಕರಿಸಲು ತುಸು ಕಷ್ಟವಾದೀತು. ಕಾರಣ, ಹಿಜರಿ ವರ್ಷವನ್ನು ಕಾರ್ಯರೂಪಕ್ಕೆ ತಂದಿರುವುದು ಎರಡನೇ ಖಲೀಫಾ ಉಮರ್ (ರ)ಕಾಲದಲ್ಲಾಗಿತ್ತು.
ಹಿಜರಿಯ ಹಿನ್ನೆಲೆ
ಪವಿತ್ರ ಇಸ್ಲಾಮಿನ ಪ್ರವಾದಿಯಾಗಿ ನಿಯುಕ್ತರಾದ ಮುಹಮ್ಮದ್ (ಸ) ರವರು ದೀನೀ ಬೋಧನೆಯ ಕಾರ್ಯರಂಗಕ್ಕಿಳಿದಾಗ ಲಾಲಿಸಿ ಕೊಂಡವರಿಂದಲೇ ಅಪಹಾಸ್ಯಕ್ಕೊಳಗಾಗ ಬೇಕಾಯಿತು. ಸತ್ಯವಂತರೆಂದು ಕರೆಯುತ್ತಿದ್ದ ನಾಲಗೆಯೇ ಅಪಹಾಸ್ಯ ಮತ್ತು ಬೈಗುಳಗಳ ಮೂಲಕ ಪ್ರವಾದಿವರ್ಯರ ವಿರುದ್ಧ ಮುಗಿಬಿದ್ದರು. ಅಲ್ಲಾಹನ ಆಜ್ಞೆಯನ್ನು ಪಾಲಿಸುವವರನ್ನು ಯಾವುದೇ ಅಡಚಣೆಗಳು ಗುರಿಯಿಂದ ಹಿಂಜರಿಯುವಂತೆ ಮಾಡಲು ಸಾಧ್ಯವಿಲ್ಲ ತಾನೆ.? ಅದರಲ್ಲೂ ಒಂದಿಡೀ ಸಮಾಜದ ಪ್ರವಾದಿವರ್ಯರಾಗಿ ಆಯ್ಕೆಯಾದ ಮಹಾನ್ ನಾಯಕರಿಂದ ಒಮ್ಮೆಯೂ ಇದನ್ನು ನಿರೀಕ್ಷಿಸಬೇಕಾಗಿಲ್ಲ.! ಸರ್ವ ವಿಧದಲ್ಲೂ ಸಂಪೂರ್ಣರೆಂಬ ಖ್ಯಾತಿಗೆ ಭಾಜನರಾದ ಮುಹಮ್ಮದ್ (ಸ) ರವರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಧರ್ಮ ಬೋಧನೆಯಲ್ಲಿ ಮುಂದುವರಿದರು. ಕ್ರಮೇಣ ಬಹಳಷ್ಟು ಜನರು ಸತ್ಯಾನ್ವೇಷಣೆಯ ದಾರಿ ಹಿಡಿದರು. ಪ್ರವಾದಿವರ್ಯರ ಶಿಷ್ಯತ್ವವನ್ನು ಪಡೆಯುವಲ್ಲಿ ಸಫಲರಾದರು.
ಕಾಲಚಕ್ರವು ಉರುಳುತ್ತಿತ್ತು. ನುಬುವ್ವತ್ ಲಭಿಸಿ 13 ವರ್ಷಗಳ ತರುವಾಯ ಅಲ್ಲಾಹನ ಆಜ್ಞೆಯಂತೆ ತವರೂರಾದ ಮಕ್ಕಾವನ್ನು ತ್ಯಜಿಸುವಂತೆ ಆಹ್ವಾನ ಬಂತು. ಶತ್ರು ಪಾಳಯದ ಉಪಟಳಗಳು ಸಹಿಸಲಾಗದ ಮಟ್ಟಕ್ಕೆ ತಲುಪಿತ್ತು. ಪ್ರವಾದಿವರ್ಯ (ಸ)ರು ತನ್ನ ಶಿಷ್ಯರಿಗೆ ಪವಿತ್ರ ಮದೀನಕ್ಕೆ ವಲಸೆ ಹೋಗುವಂತೆ ಆದೇಶ ಹೊರಡಿಸಿದರು. ಸ್ವಂತ ಮನೆ, ಮಠ, ಸಂಪತ್ತು, ಕುಟುಂಬಗಳನ್ನೆಲ್ಲಾ ತ್ಯಜಿಸಿ ಊರು ಬಿಟ್ಟು ತೆರಳಲು ಆಜ್ಞೆ ಬಂದರೆ ಅದಕ್ಕೆ ಸ್ಪಂದಿಸಲು ಯಾರಾದರೂ ರೆಡಿಯಾಗಬಹುದೆ.? ಹೌದು, ಅಲ್ಲಾಹನ ಪ್ರವಾದಿವರ್ಯರ ಶಿಷ್ಯಂದಿರು ಅದಕ್ಕೂ ರೆಡಿಯಾದರು. ಅವರು ಎಲ್ಲವನ್ನೂ ಬಿಟ್ಟು ಬರಿಗೈಯಲ್ಲಿ ಮದೀನಾದತ್ತ ಮುಖ ಮಾಡಿದರು. ಪ್ರವಾದಿವರ್ಯರ ಆಜ್ಞೆಗೆ ಅವರು ಶಿರಬಾಗಿದರು. ಮುಂದಿನ ದಾರಿಯ ಬಗ್ಗೆ ಅವರಿಗೆ ಭಯವಿರಲಿಲ್ಲ. ಬಿಟ್ಟು ಹೋಗುವವರ ಕುರಿತು ಅವರು ಚಿಂತಿಸಿಲ್ಲ. ಪವಿತ್ರ ಧರ್ಮದ ಬಗ್ಗೆ ಮಾತ್ರವೇ ಅವರಿಗೆ ಗಮನವಾಗಿತ್ತು.
ಮುಹರ್ರಂ ಹತ್ತು ಬರ್ಕತ್ತು
ಈ ತಿಂಗಳ ಹತ್ತನೇಯ ದಿನ ಹಲವಾರು ಪ್ರಮುಖ ಘಳಿಗೆಗಳಿಗೆ ಸಾಕ್ಷಿಯಾಗಿತ್ತು. ಇತಿಹಾಸದ ಪುಟಗಳಲ್ಲಿ ದಾಖಲಾದ ಬಹಳಷ್ಟು ವಿಷಯಗಳನ್ನು ಮೆಲುಕು ಹಾಕಲು ಮುಹರ್ರಮ್ ಹತ್ತಕ್ಕೆ ಸಾಧ್ಯವಿದೆ. ಪ್ರವಾದಿ ಯೂನುಸ್ (ಅ) ರವರು ಮೀನಿನ ಉದರದಿಂದ ಯಾವುದೇ ಅಪಾಯವಿಲ್ಲದೆ ವಿಮೋಚನೆಯ ದಾರಿಗೆ ಬಂದಿದ್ದು ಇದೇ ತಿಂಗಳ ಹತ್ತರ ದಿನದಂದು ಆಗಿತ್ತು. ವಿನಾಶಕಾರಿ ಫರೋಹನ ಕೀಟಲೆಗಳಿಂದ ಭಯಬೀತರಾಗಿ ಅಭಯ ತಾಣದತ್ತ ಹೊರಡಿದ ಮೂಸಾ (ಅ) ಮತ್ತು ಅನುಯಾಯಿಗಳನ್ನು ಸಂರಕ್ಷಣೆ ನೀಡಿ ದುಷ್ಟ ಫಿರ್ಔನ್ ಮತ್ತು ಅವನ ಚೇಲಾಗಳಿಗೆ ಕೊನೆಯ ದಾರಿ ತೋರಿಸಿರುವುದು ಕೂಡ ಪವಿತ್ರ ಮುಹರ್ರಂ ತಿಂಗಳ ಮೊದಲ ಹತ್ತರ ಕೊನೆಯ ದಿನದಂದಾಗಿದೆ.
ಪ್ರಮುಖ ಘಟನೆಗಳು
ಮುಹರ್ರಂ ತಿಂಗಳ 9ನೇ ಮತ್ತು 10ನೇ ದಿನಗಳನ್ನು ತಾಸೂಅ ಮತ್ತು ಆಶೂರ ಎಂದು ಕರೆಯಲಾಗುತ್ತದೆ. ಮುಸ್ಲಿಮರು ಈ ದಿನಗಳಲ್ಲಿ ಐಚ್ಛಿಕ ವ್ರತವನ್ನು ಆಚರಿಸುತ್ತಾರೆ. ಈ ತಿಂಗಳಲ್ಲಿ ಧರ್ಮ ಹೋರಾಟವನ್ನು ನಿಷೇಧಿಸಲಾಗಿದೆ. ಪ್ರವಾದಿ ಯೂನುಸ್ (ಅ) ರವರು ತಿಮಿಂಗಲದ ಹೊಟ್ಟೆಯಿಂದ ಹೊರಬಂದು ಬದುಕಿನ ಕಡೆಗೆ ಹೆಜ್ಜೆಯಿಟ್ಟರು. ಚಕ್ರವರ್ತಿ ಸುಲೈಮಾನ್ (ಅ) ರವರು ಆಡಳಿತವನ್ನು ಪಡೆದುಕೊಂಡರು. ಪ್ರವಾದಿ ಇಬ್ರಾಹಿಂ (ಅ) ರವರು ಅಲ್ಲಾಹನ ಧರ್ಮ ಪ್ರಬೋಧನೆಯಲ್ಲಿ ಮುಂದುವರಿದಾಗ ವಿನಾಶಕಾರಿ ನುಮ್ರೂದ್ನ ಬೆಂಕಿಯಿಂದ ರಕ್ಷಣೆ ಪಡೆದದ್ದು ಈ ದಿನದಲ್ಲಾಗಿತ್ತು. ಪ್ರವಾದಿ ಯೂಸುಫ್ (ಅ) ರವರು ಸ್ವಂತ ಸಹೋದರರ ಕಿರುಕುಳಕ್ಕೆ ಬಲಿಯಾಗಿ ಬಾವಿಗೆ ಎಸೆಯಲ್ಪಟ್ಟು ಮುಹರ್ರಂ 10ರಂದು ರಕ್ಷಣೆ ಪಡೆದರು.
ಲಯ ತಪ್ಪಿದ ಶಿಯಾ
ಪ್ರವಾದಿ ಶ್ರೇಷ್ಠ ಮುಹಮ್ಮದ್ (ಸ) ರವರ ಪ್ರೀತಿಯ ಮೊಮ್ಮಗ ಹುಸೈನ್ (ರ) ರವರು ಶತ್ರುಗಳ ಕುತಂತ್ರಕ್ಕೆ ಬಲಿಯಾಗಿರುವುದು ಕೂಡ ಮುಹರ್ರಂ ತಿಂಗಳ ಹತ್ತರಂದು ಆಗಿತ್ತು.
ಮಹಾನರಾದ ಹುಸೈನ್ (ರ) ರವರ ಹೆಸರಿನಲ್ಲಿ ಶಿಯಾಗಳು ನಡೆಸುವ ಅನಾಚಾರಗಳು ಪವಿತ್ರ ದೀನಿಗೆ ವಿರುದ್ಧವಾಗಿದ್ದು ಇಸ್ಲಾಮ್ ಅದನ್ನು ಅಂಗೀಕರಿಸುವುದಿಲ್ಲ. ಕಪ್ಪು ಬಟ್ಟೆ ಧರಿಸುವುದು, ಶೋಕಾಚರಣೆ, ಪೂರ್ವಿಕ ಮಹಾತ್ಮರನ್ನು ಅಪಹಾಸ್ಯ ಮಾಡುವುದು ಎಲ್ಲವೂ ಖಂಡಿತವಾಗಿಯೂ ಇಸ್ಲಾಮಿಗೆ ಸಂಬಂಧಪಟ್ಟದ್ದಲ್ಲ.
ಶಿಯಾ ಪಂಗಡವು ನಡೆಸುವ ಇಂತಹ ಅನಿಸ್ಲಾಮಿಕ ಆಚರಣೆಗಳಿಗೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಪೂರ್ವಿಕರಲ್ಲಿ ಹಲವು ಮಹಾತ್ಮರು ವಿರೋಧಿಗಳ ಕುತಂತ್ರಗಳಿಗೆ ಬಲಿಯಾಗಿರುವುದನ್ನು ಚರಿತ್ರೆ ಗ್ರಂಥಗಳಿಂದ ತಿಳಿಯಬಹುದು. ಆದರೆ ಅದರ ಹೆಸರಿನಲ್ಲಿ ಇಂದಿನ ತನಕ ಯಾವ ಮಹಾತ್ಮರು ಕೂಡ ಯಾವುದೇ ಅನಾಚಾರಗಳಿಗೆ ಕರೆ ನೀಡಿಲ್ಲ ಎಂಬುದು ಗಮನಾರ್ಹವಾಗಿದೆ. ಆ ಮಹಾತ್ಮರ ಪರಲೋಕದ ಉನ್ನತಿಗಾಗಿ ಪ್ರಾರ್ಥನೆ ಮಾಡಬಹುದೇ ಹೊರತು ಶೋಕಾಚರಣೆ ಸಿಂಧುವಲ್ಲ. ನೈಜ ಮುಸ್ಲಿಮರಲ್ಲಿ ಯಾರೂ ಆ ರೀತಿಯ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಬಾರದು.