janadhvani

Kannada Online News Paper

ಮುಹರ್ರಂ ಮತ್ತು ಹಿಜರಿ ಕ್ಯಾಲೆಂಡರ್

✍️ ಸಿದ್ದೀಕ್ ಮಳ್’ಹರಿ ಬೊಳ್ಮಾರ್

ಮುಹರ್ರಂ ಮತ್ತೊಮ್ಮೆ ಆಗತವಾಗಿದೆ. ಮುಸ್ಲಿಮರ ಪಾಲಿಗೆ ಹೊಸ ವರ್ಷ. ಹಿಜರಿ ಕ್ಯಾಲೆಂಡರಿನ ಮೊದಲನೇ ತಿಂಗಳು. ಪವಿತ್ರ ಕುರ್ ಆನ್ ಯುದ್ದ ನಿಷಿದ್ಧಗೂಳಿಸಿದ ನಾಲ್ಕು ತಿಂಗಳಲ್ಲೊಂದು. ಆದಿಪಿತ ಪ್ರವಾದಿ ಆದಂ ಅಲೈಹಿವಸ್ಸಲಾಂ ಮತ್ತು ಹವ್ವಾಹ್ ರಳಿಯಲ್ಲಾಹು ಅನ್ ಹರವರನ್ನು ಸೃಷ್ಟಿಸಿದ್ದು, ಪ್ರವಾದಿ ನೂಹ್ (ಅ.ಸ)ರವರ ಹಡಗು ಜೂದ್ ಪರ್ವತದ ಮೇಲೆ ಸ್ಥಾಪಿತವಾದದ್ದು, ಪ್ರವಾದಿ ಇಬ್ರಾಹಿಂ (ಅ.ಸ) ಜನಿಸಿದ್ದು, ಅಗ್ನಿಯಿಂದ ರಕ್ಷಣೆಹೊಂದಿದ್ದು, ಪ್ರವಾದಿ ಅಯ್ಯೂಬ್(ಅ.ಸ)ರವರ ರೋಗ ಶಮನಗೊಂಡಿದ್ದು,ಯೂನುಸ್ ಪ್ರವಾದಿಯವರು ಮೀನಿನ ಹೊಟ್ಟೆಯೊಳಗಿನಿಂದ ರಕ್ಷಣೆ ಹೊಂದಿದ್ದು, ಪ್ರವಾದಿ ಸುಲೈಮಾನ್ (ಅ.ಸ)ರವರಿಗೆ ಅಧಿಕಾರ ನೀಡಿದ್ದು ಮುಂತಾದ ಹಲವಾರು ಚರಿತ್ರೆ ಘಟನೆಗಳಿಗೆ ಈ ತಿಂಗಳು ಸಾಕ್ಷಿಯಾಗಿದೆ.
ಕರ್ಬಲ ಯುದ್ದದಲ್ಲಿ ಪ್ರವಾದಿ (ಸ.ಅ)ರವರ ಸುಪುತ್ರ ಹಝ್ರತ್ ಹುಸೈನ್ (ರ.ಅ) ಹಾಗೂ ಕೆಲವು ಪ್ರವಾದಿ ಕೌಟುಂಬಿಕರು ಕಗ್ಗೂಲೆಗೆ ಸಾಕ್ಷಿ ಯಾದದ್ದು ಇದೇ ತಿಂಗಳು.

ಮುಹರ್ರಂ ತಿಂಗಳ ಕುರಿತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ. ಪವಿತ್ರ ರಂಝಾನಿನ ನಂತರ ವ್ರತಾಚರಿಸಲು ಅತ್ಯಂತ ಮಹತ್ತರವಾದ ತಿಂಗಳು ಮುಹರಂ ಕಾರಣ ಅದು ಅಲ್ಲಾಹನು ಗೌರವಿಸಿದ ತಿಂಗಳು ಆಗಿರುತ್ತದೆ. ಅಲ್ಲಾಹನ ಹೆಸರಿನೊಂದಿಗೆ ಸೇರಿಸಿ ಈ ತಿಂಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸೂಚಿಸಿರುತ್ತಾರೆ. ಇದರಿಂದಲೇ ಈ ತಿಂಗಳಿಗೆ ಎಷ್ಟು ಮಹತ್ವವಿರಬಹುದೆಂದು.

ಅರ್ಥಮಾಡಿಕೊಳ್ಳಬಹುದು.ಮುಹರ್ರಂ ತಿಂಗಳಲ್ಲಿ ವೃತ ಸುನ್ನತ್(ಐಚ್ಛಿಕ) ಆಗಲಿಕ್ಕಿರುವ ರಹಸ್ಯವನ್ನು ಇಮಾಂ ಗಝ್ಝಾಲಿ(ರ.ಅ)ಈ ರೀತಿ ವಿವರಿಸುತ್ತಾರೆ. ಇದು ಹೊಸ ವರ್ಷದ ಪ್ರಾರಂಭ ವಾಗಿದೆ. ಸತ್ಕರ್ಮದಲ್ಲಿ ತಲ್ಲೀನರಾಗಲು ಅನಿವಾರ್ಯ ವಾದ ತಿಂಗಳು. ಜೀವನದಲ್ಲಿ ಸುಖ ಸಂಪತ್ತಿನಿಂದ ಕಂಗೊಳಿಸುಲು ಅದು ಹೇತುವಾಗಿದೆ.
ಮುಸಲ್ಮಾನರು ಹಿಜರಿ ಕ್ಯಾಲಂಡರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ.

ಅವರ ಉಪವಾಸ ,ಉಳ್ ಹಿಯ್ಯತ್,ಝಕಾತ್ , ಹಜ್ಜ್ ಮುಂತಾದ ಆರಾಧನೆ ಗಳನ್ನು ಹಿಜರಿ ವರ್ಷವನ್ನು ಆಧಾರವಾಗಿಟ್ಟುಕೊಂಡು ನಡೆಸುತ್ತಾರೆ.
” ಮುಹರ್ರಂ “ಎಂಬ ಪದದ ಭಾಷಾರ್ಥ “ನಿಷಿದ್ದ ಗೊಳಿಸಲ್ಪಟ್ಟದ್ದು”ಎಂದಾಗಿದೆ. ಸರ್ವಶಕ್ತನಾದ ಅಲ್ಲಾಹನಿಗೆ ಮನಸ್ಸು, ಶರೀರವನ್ನು ಸಮರ್ಪಿಸಿ ತಿಂಗಳನ್ನು ಸ್ವೀಕರಿಸಲು ಹಾಗೂ ಕೆಡುಕಿನಿಂದ ಮುಕ್ತಿಗೊಂಡು ಸತ್ಕರ್ಮದಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತದೆ.

ಅಜ್ಞಾನ, ಅಂಧಕಾರದಲ್ಲಿ ತುಂಬಿತುಳುಕಾಡುತಿದ್ದ ಕಾಲದಲ್ಲೂ ಅರೇಬಿಯನ್ ಯಹೂದಿಗಳು ಈ ತಿಂಗಳಿಗೆ ಪ್ರತ್ಯೇಕ ಗೌರವ ನೀಡಿ ಅದರ ಜೊತೆಗೆ ವ್ರತ ಆಚರಿಸುತ್ತಿದ್ದರು. ಮದೀನಕ್ಕೆ ವಲಸೆ ಬಂದ ನಂತರ ಪ್ರವಾದಿ ಮುಹಮ್ಮದ್ (ಸ.ಅ) ಮುಹರ್ರಂ ವ್ರತಾಚರಿಸಲು ಆದೇಶಿಸಿದರು. ರಂಝಾನ್ ತಿಂಗಳ ಉಪವಾಸ ಕಡ್ಡಾಯವಾಗಿದೆ. ಆದರೆ ಮುಹರ್ರಂ ತಿಂಗಳ ‌ತಾಸುಆಹ್ ಮತ್ತು ಆಶುರಾಹ್ ವ್ರತ ಸುನ್ನತ್ತಾಗಿದೆ.

ಮಹರ್ರಂ ತಿಂಗಳ ಈ ಆಶುರಾಹ್(10ನೇ ದಿನ) ಮಹತ್ವವುಳ್ಳದ್ದಾಗಿದೆ. ರಂಝಾನಿನಲ್ಲಿ ಕಡ್ಡಾಯವಾದ ಉಪವಾಸ ಬರುವುದಕ್ಕಿಂತ ಮುಂಚೆಯೇ ಮಕ್ಕಾದಲ್ಲಿ ಪ್ರವಾದಿ (ಸ.ಅ)ರವರು ವ್ರತವನ್ನು ಆಚರಿಸುತ್ತಿದ್ದರು.ನಂತರ ಮದೀನಕ್ಕೆ ಪಲಾಯಣಗೈದಾಗ ಯಹೂದಿಗಳು ಮುಹರ್ರಂ ಹತ್ತರಂದು ವ್ರತಾಚರಿಸುವುದನ್ನು ಕಂಡರು. ಪ್ರವಾದಿ ಮೂಸ (ಅ.ಸ) ಪ್ರಯಾಣದ ಯಶಸ್ಸನ್ನು ಸ್ಮರಿಸಿಕೊಂಡು ಅವರು ವ್ರತಾಚರಿಸುತ್ತಿದ್ದರು.ಆಗ ಪ್ರವಾದಿ ಮುಹಮ್ಮದ್ (ಸ.ಅ)ರವರು ನುಡಿದರು. ನಾವುಪ್ರವಾದಿ ಮೂಸ(ಅ.ಸ)ರಿಗೆ ನಿಮಗಿಂತಲೂ ನಿಕಟವಾಗಿರುತ್ತೇವೆ. ನಾವು ಕೂಡ ಈ ದಿನಗಳಲ್ಲಿ ವ್ರತಾಚರಿ ಬೇಕಾಗಿದೆ. ತನ್ನ ಮಾತನ್ನು ಮುಂದುವರಿಸುತ್ತಾ ಮುಂಬರುವ ವರ್ಷ ಜೀವಂತವಿದ್ದರೆ ಮುಹರ್ರಂ ಒಂಬತ್ತರಂದು ಕೂಡ ವ್ರತಾಚರಿಸುವೆನು. ಆದರೆ ಅದೇ ವರ್ಷ ಪ್ರವಾದಿ (ಸ.ಅ)ವಫಾತಾದರು. ತದನಂತರದ ವರ್ಷದಲ್ಲಿ ಸ್ವಹಾಬಿಗಳು ಮುಹರ್ರಂ 9 ರಂದು ವ್ರತಾಚರಿಸುವುದನ್ನು ರೂಢಿಸಿಕೊಂಡರು.

ಪ್ರವಾದಿ ಮುಹಮ್ಮದ್ (ಸ.ಅ)ರವರ ಮತ್ತೊಂದು ನುಡಿ. ಯಾರದರೂ ಆಶುರಾಹ್ ದಿನ ವ್ರತಾಚರಿಸಿದರೆ ಅವನ ಆ ವ್ರತ ಮತ್ತುಅವನು ಮಾಡಿದ ರಾತ್ರಿ ನಮಾಝಿನ ಕಾರಣದಿಂದ ಅಲ್ಲಾಹನು ಅರುವತ್ತು ವರ್ಷ ಆರಾಧನೆ ಮಾಡಿದ ಪುಣ್ಯವನ್ನು ದಾಖಲಿಸುವೆನು.
ಮುಹರ್ರಂ ಮೂದಲನೇ ಹತ್ತು ದಿನಗಳು ಆರಾಧನೆಗಳಿಂದ ಧನ್ಯಗೊಳಿಸಬೇಕಾದ ಘಳಿಗೆಗಳಾಗಿವೆ.ಆದ್ದರಿಂದ ದುಶ್ಚಟಗಳನ್ನು ದೂರ ಮಾಡಿ ಸತ್ಕರ್ಮ ದಲ್ಲಿ ತೂಡಗಿಸಿಕೊಳ್ಳಲು ಸಿದ್ದರಾಗೋಣ.