ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಜೂನ್ 30ರಂದು ಬಹುಮತ ಸಾಬೀತುಪಡಿಸುವಂತೆ ಮಹಾ ವಿಕಾಸ್ ಆಘಾಡಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದರು.
ವಿಶ್ವಾಸಮತ ಸಾಬೀತು ಮಾಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆ ನೀಡಿ ಎಂದು ಶಿವಸೇನಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ‘ಗುರುವಾರವೇ ವಿಶ್ವಾಸಮತ ಸಾಬೀತುಪಡಿಸಿ’ ಎಂದು ಆದೇಶಿಸಿತು. ಇದರ ಬೆನ್ನಲ್ಲೇ, ಉದ್ಧವ್ ಅವರು ರಾಜೀನಾಮೆ ಘೋಷಿಸಿದರು.
ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮ ‘ಫೇಸ್ಬುಕ್’ನಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದ್ದಕ್ಕಾಗಿ ರಾಜ್ಯದ ಜನತೆಗೆ, ಮಿತ್ರಪಕ್ಷಗಳಾದ ಎನ್ ಪಿ ಮತ್ತು ಕಾಂಗ್ರೆಸ್ನವರಿಗೆ ಕೃತಜ್ಞತೆಯನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದರು.
‘ನಾನು ಅನಿರೀಕ್ಷಿತವಾಗಿ ಇಲ್ಲಿಗೆ (ಅಧಿಕಾರಕ್ಕೆ) ಬಂದಿದ್ದೇನೆ ಹಾಗೂ ಈಗ ಅದೇ ರೀತಿಯಲ್ಲಿ ನಿರ್ಗಮಿಸುತ್ತಿದ್ದೇನೆ. ಹಾಗೆಂದು ಶಾಶ್ವತವಾಗಿ ಇಲ್ಲಿಂದ ತೆರಳುವುದಿಲ್ಲ. ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳಲಿದ್ದೇನೆ. ನನ್ನವರೆಲ್ಲರನ್ನು ಒಟ್ಟುಗೂಡಿಸಲಿದ್ದೇನೆ. ಶಿವಸೇನಾ ಮತ್ತೊಮ್ಮೆ ಪುಟಿದೇಳಲಿದೆ. ಮುಖ್ಯಮಂತ್ರಿ ಸ್ಥಾನದ ಜತೆಗೆ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಠಾಕ್ರೆ ಹೇಳಿದರು.
ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಕೆಲವು ದಿನಗಳ ಹಿಂದೆ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದ ಹತ್ತಾರು ಶಾಸಕರು ಬಂಡಾಯವೆದ್ದಿದ್ದರು. ಶಿವಸೇನಾದ ಕನಿಷ್ಠ 38 ಶಾಸಕರು, ಪಕ್ಷೇತರರು ಸೇರಿದಂತೆ ಒಟ್ಟು 50 ಶಾಸಕರ ಬೆಂಬಲ ತಮಗಿದೆ ಎಂದು ಶಿಂಧೆ ಹೇಳಿಕೊಂಡಿದ್ದರು.
ಮಹಾರಾಷ್ಟ್ರ ವಿಧಾನಸಭೆ ಬಲಾಬಲ
288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ಎನ್ಸಿಪಿ 53, ಕಾಂಗ್ರೆಸ್ನ 44, ಬಹುಜನ ವಿಕಾಸ ಆಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ.ಎಂಎನ್ಎಸ್, ಸಿಪಿಐ (ಎಂ), ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ. 13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.