ನವದೆಹಲಿ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರವಾಗಿ ಕಾಂಗ್ರೆಸ್ನಲ್ಲಿ ಭುಗಿಲೆದ್ದಿದ್ದ ಅಗ್ರ ನಾಯಕರ ನಡುವಿನ ಪ್ರತಿಷ್ಠೆಯ ಗುದ್ದಾಟಕ್ಕೆ ಕೊನೆಗೂ ತೆರೆಬಿದ್ದಿದ್ದು, ಕಾಂಗ್ರೆಸ್ ಪಕ್ಷ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಕಾಂಗ್ರೆಸ್ ವೆಬ್ಸೈಟ್ ಹಾಗೂ ಟ್ವೀಟರ್ಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.
ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಜಿಗುಟಿನ ಜಟಾಪಟಿ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ನಡೆದಿತ್ತು. ಅಂತಿಮವಾಗಿ ಕೆಲವೊಂದು ಸಂಧಾನ ಸೂತ್ರಗಳೊಂದಿಗೆ ಬಿಕ್ಕಟ್ಟನ್ನು ಪರಿಹರಿಸಿದ ನಾಯಕರು ಜನರ ಎದುರು ಒಗ್ಗಟ್ಟು ತೋರಿಸುವ ಉದ್ದೇಶದಿಂದ ಭಾನುವಾರ ಮಾಧ್ಯಮಗಳ ಎದುರು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ ಕಾಂಗ್ರೆಸ್ನ ಎಲ್ಲ ನಾಯಕರು ಮತ್ತೊಮ್ಮೆ ಸಭೆ ಸೇರಿ ಗೊಂದಲವಿರುವ ಕೆಲವೇ ಕ್ಷೇತ್ರಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಿ ಪಟ್ಟಿ ಅಂತಿಮಗೊಳಿಸಿದ್ದಾರೆ. ಜತೆಗೆ ಜಾತಿ ಆಧಾರಿತ ಪ್ರಾತಿನಿಧ್ಯದ ಬಗ್ಗೆ ಚರ್ಚೆಯೂ ನಡೆದು ಟಿಕೆಟ್ ಪಟ್ಟಿ ಅಂತಿಮಗೊಳಿಸಲಾಗಿದೆ.
ಪಟ್ಟಿಯಲ್ಲಿ 16 ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ. ಬ್ಯಾಡಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಶಿವಣ್ಣ, ತರೀಕೆರೆ ಕ್ಷೇತ್ರದ ಶ್ರೀನಿವಾಸ್, ಬಿಜಾಪುರ ಕ್ಷೇತ್ರದ ಮಕಬುಲ್ ಭಗವಾನ್, ನಾಗಠಾಣ ಕ್ಷೇತ್ರದ ರಾಜು ಅಲಗೂರು, ಬಾದಾಮಿ ಕ್ಷೇತ್ರ ಚಿಮ್ಮನಕಟ್ಟಿ, ಕೊಳ್ಳೆಗಾಲ ಕ್ಷೇತ್ರದ ಜಯಣ್ಣ, ಕಲಬುರಗಿ ಕ್ಷೇತ್ರದ ರಾಮಕೃಷ್ಣ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಮಲ್ಲಿಕಾರ್ಜುನ ಮೇಟಿ, ಕಾಗೋಡು ತಿಮ್ಮಪ್ಪ, ಹ್ಯಾರಿಸ್ ಮತ್ತು ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಜತೆಗೆ ಮನಿಯಪ್ಪ ಅವರ ಪುತ್ರಿ, ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ, ಸಿದ್ದರಾಮಯ್ಯ ಪುತ್ರ ಯತೀಂದ್ರ, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಮಹದೇವಪ್ಪ ಅವರ ಪುತ್ರನಿಗೆ ಟಿಕೆಟ್ ನೀಡಿಲ್ಲ.
ಜೆಡಿಎಸ್ನಿಂದ ವಲಸೆ ಬಂದಿರುವವರೆಲ್ಲರಿಗೂ ಟಿಕೆಟ್ ನೀಡಲಾಗಿದೆ. ಅಂತೆಯೇ ಕಳೆದ ಬಾರಿ ಎಸ್.ಆರ್. ಪಾಟೀಲ್ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಬ್ಯಾಡಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶಿವಣ್ಣ ಅವರಿಗೆ ಟಿಕೆಟ್ ನೀಡಿಲ್ಲ ಎನ್ನಲಾಗಿದೆ.