janadhvani

Kannada Online News Paper

ಮಳಲಿ: ಪುರಾತನ ಮಸೀದಿ ಕಟ್ಟಡ ನವೀಕರಣಕ್ಕೆ ತಾತ್ಕಾಲಿಕ ತಡೆ- ಜಿಲ್ಲಾಧಿಕಾರಿ, ತಹಶೀಲ್ದಾರ್ ಭೇಟಿ

ಪುರಾತನ ಮಸೀದಿಯ ರೂಪವನ್ನು ಕಂಡು ದೇವಸ್ಥಾನವೆಂದು ಭಾವಿಸಿ, ಗೊಂದಲ ಸೃಷ್ಟಿ
ಈ ವರದಿಯ ಧ್ವನಿಯನ್ನು ಆಲಿಸಿ

ಮಂಗಳೂರು : ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮ, ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿಯಲ್ಲಿರುವ ನೂರಾರು ವರ್ಷಗಳ ಹಳೆಯ ಜುಮಾ ಮಸೀದಿ ಕಟ್ಟಡ ನವೀಕರಣದ ಸಂದರ್ಭದಲ್ಲಿ ಪ್ರಾಚೀನ ದೇವಸ್ಥಾನದ ಕುರುಹು ಪತ್ತೆಯಾಗಿದೆ ಎಂಬ ಸುದ್ದಿ ಹರಡಿ ಮಳಲಿ ಪರಿಸರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡ ಘಟನೆ ಗುರುವಾರ ನಡೆದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡಲು ಆರಂಭಿಸಿದಂತೆ ಮಸೀದಿ ಬಳಿ ಜಮಾವಣೆಗೊಂಡ ಸಂಘ ಪರಿವಾರದ ಕಾರ್ಯಕರ್ತರು ಮಸೀದಿಯೊಳಗೆ ದೇವಸ್ಥಾನ ಇದೆ ಎಂದು ತಗಾದೆ ಎತ್ತಿದರೆನ್ನಲಾಗಿದೆ. ಈ ಬಗ್ಗೆ ಮಸೀದಿಗೆ ಸಂಬಂಧಿಸಿದವರು ಬಜೈ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮಸೀದಿಗೆ ರಕ್ಷಣೆ ಒದಗಿಸಿದ್ದಾರೆ.

ಪೊಲೀಸರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಂಗಳೂರು ತಹಶೀಲ್ದಾರ್ ಭೇಟಿ ನೀಡಿ ಮಸೀದಿಯ ಸ್ಥಳ ಹಾಗೂ ಮಸೀದಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಸಂಘಪರಿವಾರದ ಮುಖಂಡರ ಸಮ್ಮುಖದಲ್ಲಿ ಪರಿಶೀಲಿಸಿದರು. ಬಳಿಕ ಮಸೀದಿಯ ದಾಖಲೆ ಪತ್ರಗಳನ್ನು ಜಿಲ್ಲಾಧಿಕಾರಿ ವಶಕ್ಕೆ ಪಡೆದಿದ್ದು, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಎಂಡೋಮೆಂಟ್ ಮತ್ತು ವಕ್ಸ್ ಬೋರ್ಡ್‌ನಿಂದ ವರದಿ ಪಡೆದು ವಾರದೊಳಗೆ ಸಮಸ್ಯೆ ಪರಿಹರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಮಾಮು, “ಸುಮಾರು 900 ವರ್ಷಗಳ ಇತಿಹಾಸವಿರುವ ಮಳಲಿ ಪೇಟೆ ಜುಮಾ ಮಸೀದಿಯನ್ನು ನವೀಕರಣಗೊಳಿಸಲು ಉದ್ದೇಶಿಸಲಾಗಿದೆ. ಅದರಂತೆ ಒಳಗಿನ ಮಸೀದಿಯ ಇತಿಹಾಸಕ್ಕೆ ಧಕ್ಕೆಯಾಗದಂತೆ ರಕ್ಷಿಸಿ ಹೊರಭಾಗವನ್ನು ಕೆಡವಿ ನವೀಕರಣ ಮಾಡುವುದಕ್ಕಾಗಿ ಹೊರಗಿನ ಪಾರ್ಶ್ವವನ್ನು ಕೆಡವಲಾಗಿತ್ತು. ಈ ನಡುವೆ ಯಾರೋ ಕಿಡಿಗೇಡಿಗಳು ಒಳಗಿನ ಮಸೀದಿಯ ಚಿತ್ರವನ್ನು ದೇವಸ್ಥಾನ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹರಡಿರುವುದೇ ಈ ಗೊಂದಲಕ್ಕೆ ಕಾರಣವಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಬಂದು ಪರಿಶಿಲಿಸಿದ್ದಾರೆ. ಅವರಿಗೆ ದೇವಸ್ಥಾನ ಇರುವ ಕುರಿತು ಯಾವುದೇ ಕುರುಹು ಲಭ್ಯವಾಗಿಲ್ಲ. ಆದರೂ, ಮಸೀದಿಯ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದು, ವಾರದ ಒಳಗಾಗಿ ಸಮಸ್ಯೆ ಪರಿಹರಿಸುವುದಾಗ ಭರವಸೆ ನೀಡಿದ್ದಾರೆ”.

“ಈ ಸಮಸ್ಯೆಯ ಕುರಿತು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆಯಲಾಗಿದೆ. ಜಿಲ್ಲಾಡಳಿತವು ಹಳೆಯ ಭೂ ದಾಖಲೆಗಳು ಮತ್ತು ಮಾಲಕತ್ವದ ವಿವರಗಳನ್ನು ಪರಿಶೀಲಿಸುತ್ತಿದೆ. ಅಲ್ಲದೆ ಧಾರ್ಮಿಕ ದತ್ತಿ ಇಲಾಖೆ ಮತ್ತು ವಕ್ಸ್ ಬೋರ್ಡ್‌ಗಳಿಂದಲೂ ವರದಿಯನ್ನು ತರಿಸಿ ಸಮಗ್ರ ಪರಿಶೀಲನೆ ನಡೆಸಲಿದ್ದೇವೆ. ಹಕ್ಕುಗಳ ಸತ್ಯಾಸತ್ಯತೆಯನ್ನು ಪಡೆದು ಶೀಘ್ರದಲ್ಲೇ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಕೂಡಾ ಯಾವುದೇ ಆತುರದ ನಿರ್ಧಾರ ಕೈಗೊಳ್ಳದೆ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಬೇಕು” ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಈ ಬಗ್ಗೆ ಸಮಗ್ರ ಅಧ್ಯಯನಕ್ಕೆ ಪ್ರಾಚ್ಯವಸ್ತು ಹಾಗೂ ಭೂ ಕಂದಾಯ ಇಲಾಖೆಗೆ ಸೂಚಿಸಲಾಗುವುದು. ಇವೆರಡು ಇಲಾಖೆಗಳ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಮಂಗಳೂರು ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.

‘ಸ್ಥಳಕ್ಕೆ ಭೇಟಿ ನೀಡಲಾಯಿತು. ಸ್ಥಳೀಯರ ಜತೆ ಮಾತನಾಡಲಾಯಿತು. ದ.ಕ. ಜಿಲ್ಲಾಧಿಕಾರಿ ಜತೆ ಚರ್ಚಿಸಲಾಯಿತು. ಅಗತ್ಯ ಬಂದೋಬಸ್ತ್ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

error: Content is protected !! Not allowed copy content from janadhvani.com