ಧಾರವಾಡ,ಏ.11: ನುಗ್ಗಿಕೇರಿ ಆಂಜನೇಯ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಅಲ್ಲಿನ ಪರ್ಯಾಯಸ್ಥರೊಂದಿಗೆ ಚರ್ಚಿಸಿದರು.
‘ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾದ ಧಾರವಾಡದಲ್ಲಿ ಇಂಥ ಘಟನೆಗಳು ನಡೆಯಬಾರದಿತ್ತು. ಈ ದೇವಾಲಯ ತನ್ನ ಕೀರ್ತಿಗೆ ಜಗತ್‌ಪ್ರಸಿದ್ಧವಾಗಬೇಕೇ ಹೊರತು, ಇಂಥ ಅಪಕೀರ್ತಿಗಲ್ಲ. ಹೀಗಾಗಿ ಇಲ್ಲಿ ಸೌಹಾರ್ದತೆ ನೆಲೆಸುವಂತೆ ಸಮಾಜದ ಪ್ರತಿಯೊಬ್ಬರೂ ಸೇರಿ ಕೆಲಸ ಮಾಡಬೇಕಿದೆ’ ಎಂದು ಇಸ್ಮಾಯಿಲ್ ತಮಟಗಾರ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರ್ಯಾಯಸ್ಥ ನರಸಿಂಹ ದೇಸಾಯಿ, ‘ಇಲ್ಲಿ ಎಲ್ಲಾ ಸಮುದಾಯವರಿಗೂ ಅವಕಾಶ ಮಾಡಿಕೊಡಲಾಗಿದೆ. ನಮ್ಮ ಉದ್ದೇಶವೂ ಪ್ರತಿಯೊಬ್ಬರೂ ಸೋದರರಂತೆ ಬಾಳುವುದೇ ಆಗಿದೆ. ಈ ಕುರಿತು 12 ಜನ ಪರ್ಯಾಯಸ್ಥರು ಸಭೆ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ, ‘ಖಾಸಗಿ ಟ್ರಸ್ಟ್ ಆಗಿರುವ ನುಗ್ಗಿಕೇರಿ ದೇವಾಲಯದಲ್ಲಿ ನಡೆದಿರುವುದು ಒಂದು ಆಕಸ್ಮಿಕ ಘಟನೆ. ಈಗಾಗಲೇ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದರು.