ತಲಪಾಡಿ ( ಮಾ 26 ) : ಗ್ರಾಮಗಳ ಅಭಿವೃದ್ಧಿಗೆ ಪಕ್ಷ ಭೇಧ ಮರೆತು ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಒಂದಾಗಿ ಕೆಲಸ ಮಾಡಿದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಸರ್ಕಾರದಿಂದ ಬರುವ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸದೇ ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಬೇಕೆಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಕರೆ ನೀಡಿದರು.
ಅವರು ತಲಪಾಡಿ ಗ್ರಾಮದ ಕೆಸಿ ರೋಡ್ ನಲ್ಲಿ ಎಸ್.ಡಿ.ಪಿ.ಐ ನ ಹತ್ತು ಮಂದಿ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ವಾರ್ಡ್ ನಲ್ಲಿ ನಡೆಸಿರುವ ಅಭಿವೃದ್ಧಿ ಕಾಮಗಾರಿಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಲಪಾಡಿ ಗ್ರಾಮದಲ್ಲಿ ಎಸ್.ಡಿ.ಪಿ.ಐ ವಿರೋಧ ಪಕ್ಷವಾಗಿದ್ದು ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಧ್ವನಿ ಎತ್ತುತ್ತಾ ಬಂದಿದೆ. ಕೋವಿಡ್ ಹೆಸರಿನಲ್ಲಿ ಗ್ರಾಮ ಪಂಚಾಯತ್ ಗೆ ಸಿಗಬೇಕಾದ ಅನುದಾನವನ್ನು ಕಡಿತಗೊಳಿಸಿರುವ ಈ ಸಂದರ್ಭದಲ್ಲಿ ಇಲ್ಲಿ ಗೆದ್ದ ನಮ್ಮ ಪಕ್ಷದ ಬೆಂಬಲಿತ 10 ಮಂದಿ ಅಭ್ಯರ್ಥಿಗಳು ಒಂದು ವರ್ಷದಲ್ಲಿ 28,34,100 ರೂಪಾಯಿಗಳ ಅನುದಾನವನ್ನು ತಂದು ವಾರ್ಡ್ ಗಳ ಅಭಿವೃದ್ಧಿಗೆ ಶ್ರಮಿಸಿರುವುದು ಸಾಮಾಜಿಕ ಸೇವೆಯಲ್ಲಿ ಅವರಿಗಿರುವ ಬದ್ಧತೆಗೆ ಸಾಕ್ಷಿ ಎಂದರು.
ಸಭೆಯನ್ನುದ್ದೇಶಿಸಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ, ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷರಾದ ಇಮ್ರಾನ್ ಪೂಮಣ್ಣು ವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಜಿಲ್ಲಾ ಸಮಿತಿ ಸದಸ್ಯ ಝಾಕಿರ್ ಉಳ್ಳಾಲ್, ಬ್ಲಾಕ್ ಸಮಿತಿ ಅಧ್ಯಕ್ಷ ಸಲಾಂ ವಿದ್ಯಾನಗರ, ಅಬ್ಬಾಸ್ ಕಿನ್ಯಾ ಉಪಸ್ಥಿತರಿದ್ದರು. ರಶೀದ್ ಇಂಜಿನಿಯರ್ ಸ್ವಾಗತಿಸಿದರೆ ಇಸ್ಮಾಯಿಲ್ ಟಿ ಧನ್ಯವಾದ ಸಲ್ಲಿಸಿದರು. ಮೊಯ್ದಿನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.