ನ್ಯೂಯಾರ್ಕ್, ಮಾರ್ಚ್.16: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಗಳವಾರ ಮಾರ್ಚ್ 15 ಅನ್ನು “ಇಸ್ಲಾಮೋಫೋಬಿಯಾ ವಿರುದ್ಧ ಹೋರಾಡುವ ಅಂತಾರಾಷ್ಟ್ರೀಯ ದಿನ” ಎಂದು ಆಚರಿಸುವ ನಿರ್ಣಯವನ್ನು ಅಂಗೀಕರಿಸಿದ್ದಕ್ಕೆ ಭಾರತ ತನ್ನ ಕಳವಳ ವ್ಯಕ್ತಪಡಿಸಿದೆ. “ನಿರ್ದಿಷ್ಟ ಧರ್ಮದ ವಿರುದ್ಧದ ಭಯವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸುವಷ್ಟರ ಮಟ್ಟಿಗೆ ಬಿಂಬಿಸಲಾಗುತ್ತಿದೆ. ವಿಶ್ವದೆಲ್ಲೆಡೆ ವಿಶೇಷವಾಗಿ ಹಿಂದೂ ವಿರೋಧಿ, ಬೌದ್ಧ ವಿರೋಧಿ ಮತ್ತು ಸಿಖ್ ವಿರೋಧಿ ಘಟನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಿರ್ದಿಷ್ಟ ಧರ್ಮದ ಅಂತಾರಾಷ್ಟ್ರೀಯ ದಿನ ಆಚರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಭಾರತ ಹೇಳಿದೆ.
ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್, ಶಾಂತಿಯ ಅಜೆಂಡಾದ ಭಾಗವಾಗಿ ಇಸ್ಲಾಮೋಫೋಬಿಯಾವನ್ನು ಎದುರಿಸಲು ಮಾರ್ಚ್ 15 ಅನ್ನು ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಲು ಪ್ರಸ್ತಾಪಿಸಿದರು. 193 ಸದಸ್ಯರನ್ನೊಳಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಅಂಗೀಕರಿಸಲಾಯಿತು.
ಪ್ರಸ್ತಾವನೆ ಅಂಗೀಕಾರಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ “ಅಂಗೀಕರಿಸಲ್ಪಟ್ಟಿರುವ ಪ್ರಸ್ತಾವವು ತನ್ನ ಗುರಿಯನ್ನು ಈಡೇರಿಸಿಕೊಳ್ಳುವ ನಂಬಿಕೆ ಇಲ್ಲ. ಆಯ್ದ ಧರ್ಮಗಳ ಆಧಾರದ ಮೇಲೆ ‘ಫೋಬಿಯಾ’ಗಳ ಕುರಿತು ಹಲವಾರು ಪ್ರಸ್ತಾವನೆಗಳು ಭವಿಷ್ಯದಲ್ಲಿ ಹುಟ್ಟಿಕೊಳ್ಳುತ್ತವೆ. ಧರ್ಮದ ಆಧಾರದ ಮೇಲೆ ವಿಶ್ವಸಂಸ್ಥೆಯನ್ನು ವಿಭಜಿಸುತ್ತದೆ. ಶಾಂತಿ ಮತ್ತು ಸೌಹಾರ್ದತೆಯ ಒಂದೇ ವೇದಿಕೆಯಲ್ಲಿ ನಮ್ಮನ್ನು ಒಟ್ಟುಗೂಡಿಸುವ ಮತ್ತು ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸುವ ಬದಲು ಇಂತಹ ಧಾರ್ಮಿಕ ವಿಷಯಗಳ ನಮ್ಮನ್ನು ವಿಭಜಿಸಲಿವೆ ಎಂದು ತಿರುಮೂರ್ತಿ ಹೇಳಿದರು.
ಇಸ್ಲಾಮೋಫೋಬಿಯಾದ ವಿಷಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಲು ಜಾಗತಿಕ ಸಂಸ್ಥೆಗಳನ್ನು ಒತ್ತಾಯಿಸಿದ ಭಾರತೀಯ ರಾಯಭಾರಿ, ನಿರ್ಣಯದಲ್ಲಿ ‘ಬಹುತ್ವ’ ಎಂಬ ಪದವು ಯಾವುದೇ ಉಲ್ಲೇಖವನ್ನು ಕಾಣದಿರುವುದು ದುರದೃಷ್ಟಕರ ಮತ್ತು ಅದನ್ನು ಸೇರಿಸಲು ನಿರ್ಣಯ ಪ್ರಸ್ತಾಪಿಸಿದ ರಾಷ್ಟ್ರಗಳು ಸೂಕ್ತವೆಂದು ಕಂಡುಕೊಂಡಿಲ್ಲ ಎಂದು ಹೇಳಿದರು. ಭಾರತದ ಹೊರತಾಗಿ ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟ ಕೂಡ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಪಂಚದಾದ್ಯಂತ ಧಾರ್ಮಿಕ ಅಸಹಿಷ್ಣುತೆ ಇದೆ. ಆದರೆ ನಿರ್ಣಯದಲ್ಲಿ ಇಸ್ಲಾಂ ಧರ್ಮವನ್ನು ಮಾತ್ರ ಸೇರಿಸಲಾಗಿದೆ ಮತ್ತು ಇತರರನ್ನು ಹೊರಗಿಡಲಾಗಿದೆ ಎಂದು ತಿಳಿಸಿದ ಭಾರತೀಯ ರಾಯಭಾರಿ, ಇತರ ಧರ್ಮಗಳ ವಿರುದ್ಧ ನಡೆದ ದೌರ್ಜನ್ಯಗಳ ಬಗ್ಗೆ ಜಾಗತಿಕ ಸಂಸ್ಥೆಗಳಿಗೆ ನೆನಪಿಸಿ ಕೊಟ್ಟರು. ನಿರ್ಣಯವು ಒಐಸಿಯ 57 ಸದಸ್ಯರು ಮತ್ತು ಚೀನಾ ಹಾಗೂ ರಷ್ಯಾ ಸೇರಿದಂತೆ ಎಂಟು ಇತರ ದೇಶಗಳಿಂದ ಬೆಂಬಲವನ್ನು ಪಡೆಯಿತು.