janadhvani

Kannada Online News Paper

ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ

ಮದ್ರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಯಾವುದೇ ಪಾಠ ಮಾಡುವುದಿಲ್ಲ. ಇದು ಆಧಾರ ರಹಿತ ಆಪಾದನೆಯಾಗಿದೆ.

ಬೆಂಗಳೂರು: ಮದ್ರಸಾಗಳಲ್ಲಿ ಧಾರ್ಮಿಕ ಭಯೋತ್ಪಾದನೆ ಮತ್ತು ಮೂಲಭೂತವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಂಘ ಪರಿವಾರ ಅಪಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ರಾಜ್ಯದ ಮದ್ರಸಾಗಳಲ್ಲಿ ಯಾವುದೇ ತರದಲ್ಲೂ ಮೂಲಭೂತವಾದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರ ನೀಡಿದೆ.

ನಿಜವಾಗಿ ಮದ್ರಸಾಗಳಲ್ಲಿ ಸಮಸ್ತ ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಪಾಠ ಮಾಡಲಾಗುತ್ತದೆ, ಮದ್ರಸಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಪಾಠ ಮಾಡುತ್ತಿಲ್ಲ. ಇದು ಆಧಾರರಹಿತ ಆರೋಪವಾಗಿದೆ ಎಂದು ಮುಜುರಾಯಿ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್ ನಲ್ಲಿ ಉತ್ತರಿಸಿದ್ದಾರೆ.

ಮದ್ರಸಾಗಳ ಶಿಕ್ಷಣ ಕುರಿತು ಸಂಘ ಪರಿವಾರದ ಹಿನ್ನೆಲೆಯ ವಿಧಾನಪರಿಷತ್ ಸದಸ್ಯರಾದ ಮುನಿರಾಜುಗೌಡ ಮತ್ತು ಎನ್.ರವಿಕುಮಾರ್ ಈ ಹಿಂದಿನ ಹಲವು ಅಧಿವೇಶನಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದರು. ಈ ಪ್ರಶ್ನೆಗಳಿಗೆ ಇದೇ ಬಿಜೆಪಿ ಸರಕಾರವು ಮದ್ರಸಾಗಳಲ್ಲಿ ಆಧುನಿಕ ಮತ್ತು ಉನ್ನತ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಉತ್ತರಿಸಿದೆ.
ವಿಧಾನಪರಿಷತ್ನಲ್ಲಿ ಬುಧವಾರ ನಡೆದ ಅಧಿವೇಶನದಲ್ಲಿ ಎನ್.ರವಿಕುಮಾರ್ ಅವರು ಮದ್ರಸಾ ಶಿಕ್ಷಣ ಮತ್ತು ಆಪಾದನೆಗಳ ಬಗ್ಗೆ ಒಟ್ಟು 3 ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೊರ ದೇಶ ಮತ್ತು ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಬಂದು ಮದ್ರಸಾ ಶಿಕ್ಷಣ ಪಡೆಯುವ ಬಗ್ಗೆ ಸಂವಿಧಾನಾತ್ಮಕವಾಗಿ ಯಾವುದೇ ನಿರ್ಬಂಧವಿರುವುದಿಲ್ಲ. ನಮ್ಮ ರಾಜ್ಯದ ಮದ್ರಸಾಗಳಲ್ಲ್ಲಿ ಅತೀ ಉನ್ನತ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮೂಲಭೂತವಾದ ಶಿಕ್ಷಣ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಉತ್ತರಿಸಿದ್ದಾರೆ.

ಅದೇ ರೀತಿ ಮದ್ರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಯಾವುದೇ ಪಾಠ ಮಾಡುವುದಿಲ್ಲ. ಇದು ಆಧಾರ ರಹಿತ ಆಪಾದನೆಯಾಗಿದೆ. ನೈಜವಾಗಿ ಮದ್ರಸಾಗಳಲ್ಲಿ ಸಮಸ್ತ ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಪಾಠ ಮಾಡಲಾಗುತ್ತದೆ. ಇತರ ಶಿಕ್ಷಣ ಸಂಸ್ಥೆಗಳಂತೆ ಮದ್ರಸಾ ಶಿಕ್ಷಣ ಸಂಸ್ಥೆಗಳಿಂದಲೂ ಸರಕಾರಕ್ಕೆ ಗಣನೀಯ ಆದಾಯವಿರುವುದಿಲ್ಲ ಎಂದು ಹೇಳಿದೆ.

ಕಳೆದ ತಿಂಗಳು (ಫೆಬ್ರುವರಿ 22) ನಡೆದ ಅಧಿವೇಶನದಲ್ಲೂ ಮುನಿರಾಜು ಗೌಡ ಪಿ.ಎಂ. ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ (32-282) ಗೆ 2022ರ ಫೆ.17ರಂದು ಖುದ್ದು ಉತ್ತರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮದ್ರಸಾಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಮಾಹಿತಿಯನ್ನು ಸರಕಾರದ ಯಾವುದೇ ಇಲಾಖೆಯು ಸಂಗ್ರಹಿಸುತ್ತಿಲ್ಲವೆಂದು ಉತ್ತರಿಸಿದ್ದರು.

ಇನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಮದ್ರಸಾಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಯಾವುದೇ ಅನುದಾನವನ್ನೂ ನೀಡುತ್ತಿಲ್ಲ. ಆದರೆ, ರಾಜ್ಯದಲ್ಲಿನ ವಕ್ಫ್ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮದ್ರಸಾಗಳನ್ನು ಆಧುನೀಕರಣಗೊಳಿಸಲು, ಔಪಚಾರಿಕ ಶಿಕ್ಷಣ, ಗಣಕಯಂತ್ರ ಶಿಕ್ಷಣ ನೀಡಲು ಅಗತ್ಯವಿರುವ ಮೂಲಭೂತ ಸೌಲಭ್ಯ, ನೀರು, ಶೌಚಾಲಯ, ವಸತಿ ಸೌಲಭ್ಯಗಳ ಕೊರತೆ, ಪೀಠೋಪಕರಣಗಳು, ಗಣಕಯಂತ್ರಗಳು, ಗ್ರಂಥಾಲಯ ಸೌಲಭ್ಯ ಒದಗಿಸಲು ಒಂದು ಸಂಸ್ಥೆಗೆ ಒಂದು ಬಾರಿಗೆ ಮಾತ್ರ ಗರಿಷ್ಠ 10 ಲಕ್ಷ ರೂ.ಗಳ ಅನುದಾನ ನೀಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು.

ಆಧುನಿಕ ಕನ್ನಡ, ಆಂಗ್ಲಭಾಷೆ, ಗಣಕೀಕೃತ ಶಿಕ್ಷಣ ಸೇರಿದಂತೆ ಇಸ್ಲಾಂ ಸಿದ್ದಾಂತಗಳ ಕುರಿತಾಗಿ ಶಿಕ್ಷಣ ನೀಡಲಾಗುತ್ತಿದೆ. ಈ ಶಿಕ್ಷಣವನ್ನು ಮದ್ರಸಾಗಳಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ಮದ್ರಸಾಗಳಿಗೆ ಸರಕಾರದ ಅನುದಾನ ಮಂಜೂರಾಗಿರುವುದಿಲ್ಲ ಎಂದು ಉತ್ತರದಲ್ಲಿ ವಿವರಿಸಿದ್ದರು.

2019-20ರಲ್ಲಿ 29.46 ಕೋಟಿ ರೂ., 2020-21ರಲ್ಲಿ 5 ಕೋಟಿ ರೂ., 2021-22ರಲ್ಲಿ 3.74 ಕೋಟಿ ರೂ. ಸೇರಿ ಈ ಮೂರು ವರ್ಷಗಳಲ್ಲಿ 38.2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯ ಸರಕಾರದ ಆದೇಶದಂತೆ ಅನುದಾನ ಕೋರಿ ಪ್ರಸ್ತಾವಗಳೊಂದಿಗೆ ಸಲ್ಲಿಸುವ ಮದ್ರಸಾ ಸಂಸ್ಥೆಗಳ ಮಕ್ಕಳ ಮಾಹಿತಿ ಅಂದರೆ ಮಕ್ಕಳ ಹೆಸರು ಮಾತ್ರ ಲಭ್ಯವಿದೆ ಎಂದು ಉತ್ತರಿಸಿದ್ದರು.
ಸರಕಾರದ ವತಿಯಿಂದ ಮದ್ರಸಾಗಳಿಗೆ ವೇತನ ಇತ್ಯಾದಿ ನೀಡಲಾಗುತ್ತಿಲ್ಲವಾದ್ದರಿಂದ ತೆರಿಗೆದಾರರನ್ನು ಕೊಲ್ಲು ಎಂದಂತಾಗುವುದಿಲ್ಲ. ಮದ್ರಸಾ ಶಿಕ್ಷಣ ಪಡೆದವರು ಉಗ್ರ ಸಂಘಟನೆಗಳಲ್ಲಿ ಭಾಗಿಯಾಗಿದ್ದಲ್ಲಿ ಭಾರತದ ಪ್ರಚಲಿತ ಕಾನೂನಿನ ಅನ್ವಯ ಕ್ರಮ ವಹಿಸಲಾಗುತ್ತಿದೆ.

ರಾಜ್ಯದಲ್ಲಿ ಮದ್ರಸಾ ಶಿಕ್ಷಣವನ್ನು ನಿರ್ಬಂಧಿಸುವ ಕುರಿತು ಯಾವುದೇ ಪ್ರಸ್ತಾವ ಇರುವುದಿಲ್ಲ.(ಶಶಿಕಲಾ ಜೊಲ್ಲೆ, ಮುಜುರಾಯಿ ಮತ್ತು ವಕ್ಫ್ ಸಚಿವೆ)

error: Content is protected !! Not allowed copy content from janadhvani.com