janadhvani

Kannada Online News Paper

ಇತ್ಯರ್ಥವಾಗದ ಹಿಜಾಬ್ ಅರ್ಜಿ- ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದ ಏಕಸದಸ್ಯ ಪೀಠ

ಉಡುಪಿಯ ಮಹಿಳಾ ಕಾಲೇಜೊಂದರ ಅದ್ಯಾಪಕರು ಮಾಡಿದ ಎಡವಟ್ಟಿನಿಂದಾಗಿ ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷ ಹಬ್ಬಿದೆ.

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಮುಸ್ಲಿಂ ವಿದ್ಯಾರ್ಥಿನಿಗಳು ತಲೆಗೆ ಹಿಜಾಬ್ ಅಥವಾ ಶಾಲು ಹಾಕಿ ಕಾಲೇಜಿಗೆ ತೆರಳುತ್ತಿದ್ದು, ಉಡುಪಿಯ ಮಹಿಳಾ ಕಾಲೇಜೊಂದರ ಅದ್ಯಾಪಕರು ಮಾಡಿದ ಎಡವಟ್ಟಿನಿಂದಾಗಿ ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷ ಹಬ್ಬಿದೆ.

ನಿನ್ನೆ ಕಾಲೇಜುಗಳಲ್ಲಿ ಕೇಸರೀ ಶಾಲು ಧರಿಸಿ, ವಿದ್ಯಾರ್ಥಿಗಳು ಹೋರಾಟ ಮಾಡಿದ್ದರು. ಧರಣಿಯಲ್ಲಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವರಿಗೆ ಗಾಯಗಳಾಗಿವೆ. ಪರ-ವಿರೋಧ ಹೆಸರಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು ದಾಂಧಲೆ ನಡೆಸಿದ್ದರು.ಕೇಸರೀ ಶಾಲು ಧರಿಸಲು ನಿರಾಕರಿಸಿದ ವಿದ್ಯಾರ್ಥಿಗೆ ಚೂರಿಯಿಂದ ಇರಿಯಲಾಯ್ತು. ಶಿವಮೊಗ್ಗ, ದಾವಣಗೆರೆ, ಬನಹಟ್ಟಿ ಸಂಪೂರ್ಣ ರಣಾಂಗಣವಾಗಿತ್ತು.

ಉಡುಪಿಯಲ್ಲಿ ಉದ್ಭವಿಸಿದ ಹಿಜಾಬ್ ನಿಷೇಧ ಪ್ರಕರಣದ ಹಿನ್ನೆಲೆಯಲ್ಲಿ, 2022ರ ಫೆ.5ರಂದು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಉಡುಪಿ ಜಿಲ್ಲೆಯ ಅರ್ಜಿದಾರರು-ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ನಂತರ ಬೇರೆ ಬೇರೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುವುದರೊಂದಿಗೆ ಈ ವಿಚಾರ ರಾಜ್ಯದ ವಿವಿಧೆಡೆ ಹಬ್ಬಿತು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಇದೀಗ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದೆ.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಏಕಸದಸ್ಯ ಪೀಠ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸಿಜೆಗೆ ವರ್ಗಾಹಿಸಿದ್ದು ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟ್ ಸಿಜೆ ಈ ಬಗ್ಗೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ನ ರಿಜಿಸ್ಟ್ರಾರ್ ಗೆ ನ್ಯಾಯಮೂರ್ತಿ ನಿರ್ದೇಶನ ನೀಡಿದ್ದಾರೆ. ಮುಂದಿನ ವಿಚಾರಣೆ ವೇಳೆ ಅರ್ಜಿದಾರರು ಮನವಿ ಸಲ್ಲಿಸಬಹುದು. ಇನ್ನು ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ನಿನ್ನೆ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆ ನಡೆಸಿದ್ದರು. ಅರ್ಜಿದಾರರ ಪರವಾಗಿ ದೇವದತ್ ಕಾಮತ್ ವಾದ ಮಂಡಿಸಿದ್ದರೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿದ್ದರು. ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು. ಇಂದು ಹಿರಿಯ ವಕೀಲ ಸಂಜಯ್ ಹೆಗಡೆ ವಾದ ಮಂಡನೆ ಮಾಡಿದ್ದರು.

ಇಂದು ಮಧ್ಯಾಹ್ನ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ದೀಕ್ಷಿತ್ ಅವರು ಸಮಸ್ಯೆ ಪರಿಗಣಿಸಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವ ಸುಳಿವು ನೀಡಿದರು. ಆದರೆ, ಅರ್ಜಿದಾರರ ಪರ ವಕೀಲರು ಮಧ್ಯಂತರ ಆದೇಶ ನೀಡುವಂತೆ ಪೀಠವನ್ನು ಒತ್ತಾಯಿಸಿದರು.
ಮಧ್ಯಂತರ ಆದೇಶವನ್ನು ವಿರೋಧಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ, ಮಧ್ಯಂತರ ಆದೇಶವನ್ನು ನೀಡುವುದು ಅರ್ಜಿದಾರರ ಪರವಾಗಿ ಅಂತಿಮ ಆದೇಶಕ್ಕೆ ಸಮಾನವಾಗಿರುತ್ತದೆ. ಈ ಸಮಸ್ಯೆ ಪ್ರತಿದಿನ ಒಂದು ತಿರುವು ಪಡೆಯುತ್ತಿದ್ದು, ಎಲ್ಲರ ಕಣ್ಣುಗಳು ನ್ಯಾಯಾಲಯದತ್ತ ನೆಟ್ಟಿದೆ. ಆದ್ದರಿಂದ ತೀರಾ ತುರ್ತು ಆದ್ದರಿಂದ ನ್ಯಾಯಾಲಯವು ಅಂತಿಮ ಆದೇಶವನ್ನು ಶೀಘ್ರವಾಗಿ ರವಾನಿಸಬೇಕು ಎಂದು ಅವರು ವಾದಿಸಿದರು.

error: Content is protected !! Not allowed copy content from janadhvani.com