ಶಿವಮೊಗ್ಗ: ಹಿಜಾಬ್ ವಿವಾದವಾಗುವ ವಿಷಯವೇ ಅಲ್ಲ. ಮುಸ್ಲಿಂ ಹೆಣ್ಮಕ್ಕಳು ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿರುವುದು ಕೂಡ ಹೊಸದೇನಲ್ಲ. ಸಮವಸ್ತ್ರದ ದುಪ್ಪಟ್ಟಾದಲ್ಲಿ ತಲೆ ಮುಚ್ಚಿಕೊಂಡರೆ ಸಮಸ್ಯೆ ಏನು? ಇಲ್ಲಿ ಸಮಸ್ಯೆ ಹಿಜಾಬ್‌ನದ್ದಲ್ಲ, ಮನಸ್ಥಿತಿಯದ್ದು. ಏಕಾಏಕಿ ಹಿಜಾಬ್ ಸಮಸ್ಯೆಯಾಗಿ ಉಲ್ಬಣಗೊಂಡಿದ್ದು ಯಾಕೆ?
ಈ ಹಿಂದೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಉಂಟಾದಾಗ ಶೀಘ್ರವೇ ಬಗೆಹರಿದಿದೆ. ಆದರೆ ಕರಾವಳಿಯಲ್ಲಿ ಮಾತ್ರ ಇದು ಉಲ್ಬಣವಾಗುತ್ತಿರುವುದೇಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ವಿದ್ಯಾರ್ಥಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಮ್ಮ ಕಾರ್ಯ ಸಾಧಿಸುವವರ ಬಗ್ಗೆ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕು. ಕ್ಯಾಂಪಸ್‌ಗಳನ್ನು ಪ್ರಯೋಗ ಶಾಲೆಗಳನ್ನಾಗಿ ಮಾಡುವ ಕುತ್ಸಿತ ಮನಸ್ಸುಗಳ ಷಡ್ಯಂತ್ರವನ್ನು ಆರಿತುಕೊಳ್ಳಬೇಕು.
ಸಂವಿಧಾನಬದ್ಧ ಹಕ್ಕುಗಳು ಇರುವಾಗ ಇಲ್ಲಿ ಆಯ್ಕೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಜಾಬ್ ಮುಖ್ಯವೋ? ಶಿಕ್ಷಣ ಮುಖ್ಯವೋ? ಎನ್ನುವ ಪ್ರಶ್ನೆಗಳು ಅಲ್ಪಸಂಖ್ಯಾತ ಸಮುದಾಯವನ್ನು ಇನ್ನಷ್ಟು ದುರ್ಬಲಗೊಳಿಸುವ ತಂತ್ರ ಮಾತ್ರವಲ್ಲದೇ, ಸಮುದಾಯವನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕುತಂತ್ರವೂ ಹೌದು.
ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಕ್ಯಾಂಪಸ್‌ನೊಳಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರ ಮನಸ್ಥಿತಿ ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು. ಭಾರತದಂಥ ಪ್ರಜಾಸತಾತ್ಮಕ ರಾಷ್ಟ್ರದಲ್ಲಿ ಇಂಥ ಸರ್ವಾಧಿಕಾರಿ ಧೋರಣೆ ಒಪ್ಪಿಕೊಳ್ಳುವಂಥದ್ದಲ್ಲ. ಬಟ್ಟೆಯ ಕಾರಣಕ್ಕೆ ಶಿಕ್ಷಣದ ಮೂಲಭೂತ ಹಕ್ಕನ್ನು ಕಿತ್ತುಕೊಂಡಿರುವುದು ಐತಿಹಾಸಿಕ ದುರಂತ. ಆಸಕ್ತರು ಹಿಜಾಬ್ ಧರಿಸುವುದರಿಂದ ಇತರ ಯಾರಿಗೂ ತೊಂದರೆಯುಂಟು ಮಾಡುವುದಿಲ್ಲ. ಆದುದರಿಂದ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ಕೊಡುವುದೊಂದೇ ಈ ವಿವಾದಕ್ಕೆ ಪರಿಹಾರ.
ಲತೀಫ್ ಸಅದಿ
ಅಧ್ಯಕ್ಷರು SSF ಕರ್ನಾಟಕ ರಾಜ್ಯ